ಮಂಗಳೂರು, ಆಗಸ್ಟ್ 27: ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಮಹೇಶ್ ಶೆಟ್ಟಿ ತಿಮರೋಡಿ ಮನೆ ಮಂಗಳವಾರ ತಡರಾತ್ರಿ 2-30 ರವರೆಗೂ ಎಸ್ ಐಟಿ ತಪಾಸಣೆ ನಡೆಸಿದೆ. ಈ ವೇಳೆ ವಿಡಿಯೋ ರೆಕಾರ್ಡಿಂಗ್ ಸೇರಿದಂತೆ , ಫೋನ್ ಮಾಹಿತಿ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವ ಹೂಳಲಾಗಿತ್ತು ಎಂಬ ಪ್ರಕರಣದಲ್ಲಿ ಬಂಧಿತನಾದ ಮಾಸ್ಕ್ಮ್ಯಾನ್ ಚಿನ್ನಯ್ಯ ವಿಚಾರಣೆ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ದೊರೆತಿದೆ. ಅಲ್ಲದೆ, ‘ಬುರುಗಡೆ ಗ್ಯಾಂಗ್’ ಚಿನ್ನಯ್ಯನ ವಿಚಾರವಾಗಿ ಏನೇನು ಪ್ಲಾನ್ ಮಾಡಿತ್ತು ಎಂಬುದು ತಿಳಿದುಬಂದಿದೆ. ಚಿನ್ನಯ್ಯ ಸಿಕ್ಕಿಬಿದ್ದರೆ ಯಾವ ರೀತಿ ಬಿಂಬಿಸಬೇಕು ಎಂಬುದಕ್ಕೂ ವಿಡಿಯೋ ಮಾಡಿಸಿ ಇಡಲಾಗಿತ್ತು.
25ಕ್ಕೂ ಹೆಚ್ಚು ವಿಡಿಯೋ ಮಾಡಿಸಿಟ್ಟಿದ್ದ ‘ಬುರುಡೆ’ ಗ್ಯಾಂಗ್ :ತಿಮರೋಡಿ ಮನೆಯ ಸೀಕ್ರೇಟ್ ರೂಂನಿಂದ ಚಿನ್ನಯ್ಯನ ಸಂದರ್ಶನಗಳನ್ನು ಮಾಡಲಾಗಿತ್ತು. ಸುಮಾರು 25 ಕ್ಕೂ ಹೆಚ್ಚು ಸಂದರ್ಶನದ ವಿಡಿಯೋಗಳನ್ನು ಸಿದ್ದಮಾಡಿಡಲಲಾಗಿತ್ತು. ಇವುಗಳನ್ನು ಪರಿಶೀಲಿಸಲಿರುವ ಎಸ್‌ಐಟಿ ಇದರ ಆಧಾರದ ಮೇಲೆ ಮತ್ತಷ್ಟು ಜನರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಚಿನ್ನಯ್ಯನ ವಿಚಾರಣೆ ವೇಳೆಯೂ ಬಹಿರಂಗ ಆಗುವ ಅಂಶಗಳ ಮೇಲೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದ್ದು, ಬುರುಡೆ ಷಡ್ಯಂತ್ರದ ಹಿಂದಿನ ಗ್ಯಾಂಗ್ ಗೆ ಈಗ ಬಂಧನ ಭೀತಿ ಎದುರಾಗಿದೆ. ಚಿನ್ನಯ್ಯನ ಬಳಸಿಕೊಂಡು ಷಡ್ಯಂತ್ರ ರೂಪಿಸಿರುವ ಹಿನ್ನೆಲೆ ಆತ ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಅಂಶಗಳನ್ನು ಆಧರಿಸಿ ಎಫ್ ಐಆರ್ ದಾಖಲಾಗುವ ಸಾಧ್ಯತೆ ಇದೆ. ವಿಡಿಯೋ ಆಡಿಯೋ ಸಾಕ್ಷಿಗಳೂ ಕೂಡಾ ಸಿಕ್ಕಿವೆ.
ಮಾಸ್ಕ್ಮ್ಯಾನ್ ಚಿನ್ನಯ್ಯ ಬಂಧನವಾದರೆ ಯಾವ ವಿಡಿಯೋ ಬಿಡುಗಡೆ ಮಾಡಬೇಕು, ಚಿನ್ನಯ್ಯ ಓಡಿ ಹೋದರೆ ಯಾವ ವಿಡಿಯೋ, ಚಿನ್ನಯ್ಯ ಮೃತಪಟ್ಟರೆ ಯಾವ ವಿಡಿಯೋ; ಈ ರೀತಿಯಾಗಿ ಇಂತಹ ಪ್ರತಿಯೊಂದು ಸಂದರ್ಭಕ್ಕೂ ಗ್ಯಾಂಗ್ ಪ್ರತ್ಯೇಕ ವಿಡಿಯೋ ತಯಾರಿಸಿಕೊಂಡಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಇಷ್ಟೇ ಅಲ್ಲದೆ, ಯುವತಿಯ ಅತ್ಯಾಚಾರ ಪ್ರಕರಣ ಮುನ್ನೆಲೆಗೆ ಬಂದರೆ ಅದಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲು ವಿಶೇಷ ವಿಡಿಯೋ ಸಿದ್ದಪಡಿಸಲಾಗಿತ್ತು. ಯಾರು ಯಾರ ಹೆಸರು ಬರುತ್ತದೆಯೋ, ಆ ಸಂದರ್ಭದಲ್ಲಿ ಪ್ರತ್ಯೇಕ ವಿಡಿಯೋಗಳನ್ನು ಪ್ರಸಾರ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಚಿನ್ನಯ್ಯ ಎಸ್ಐಟಿ ಬಳಿ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಈ ಮೂಲಕ ಧರ್ಮಸ್ಥಳ ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದ್ದು, ‘ಬುರುಡೆ’ ಗ್ಯಾಂಗ್‌ನ ಕಾರ್ಯವೈಖರಿ ಒಂದೊಂದಾಗಿ ಬಹಿರಂಗವಾಗುತ್ತಿದೆ.
ಮಂಗಳವಾರವಷ್ಟೇ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರನ ಮನೆಗಳಿಗೆ ತೆರಳಿದ್ದ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನ ಮೊಬೈಲ್ ವಶಪಡಿಸಿಕೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post