ಮಂಗಳೂರು: ಶತಮಾನೋತ್ಸವದ ಸಂಭ್ರಮದಲ್ಲಿರುವ ನಗರದ ರಥಬೀದಿಯ ಸಾರ್ವಜನಿಕ ಶಾರದಾ ಮಹೋತ್ಸವದ ಅಂಗವಾಗಿ ಆಚಾರ್ಯ ಮಠದಲ್ಲಿ ಕಾಶೀಮಠಾಧಿಪತಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಸೋಮವಾರ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿಸಿದರು. ಸ್ವರ್ಣ ನವಿಲು, ಸ್ವರ್ಣ ವೀಣೆ, ಸ್ವರ್ಣ ಕೈಬಳೆ ಮತ್ತು ಇತರ ಸ್ವರ್ಣಾಭರಣಗಳಿಂದ ಭೂಷಿತಳಾದ ಶಾರದಾ ಮಾತೆಗೆ ಆರತಿಯನ್ನು ಬೆಳಗಲಾಯಿತು. ಪ್ರತಿಷ್ಠಾಪನೆಯಲ್ಲಿ ಪ್ರಧಾನ ಅರ್ಚಕ ಜೆ. ಭಾಸ್ಕರ ಭಟ್, ವೈದಿಕರಾದ ಪಂಡಿತ ಎಂ. ನರಸಿಂಹ ಆಚಾರ್ಯ, ಪಂಡಿತ ಕಾಶೀನಾಥ ಆಚಾರ್ಯ, ವೇದಮೂರ್ತಿ ವೈಕುಂಠ ಭಟ್, ಸಮಿತಿಯ ಅಧ್ಯಕ್ಷ ಡಾ. ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ವಿಠಲ ಆಚಾರ್ಯ, ಅಲಂಕಾರ ತಂಡದ ರಘುರಾಮ ಕಾಮತ್, ಸಮಿತಿಯ ಪದಾಧಿಕಾರಿಗಳು ಇದ್ದರು. ಶಾರದಾ ಮೂರ್ತಿಯ ಎದುರು ಸರಸ್ವತಿ ಕಲಾ ಮಂಟಪದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಂಗಳವಾರ ಸಹಸ್ರ ಚಂಡಿಕಾ ಯಾಗ ಆರಂಭವಾಗಲಿದ್ದು, ಅ.2ರಂದು ಬೆಳಿಗ್ಗೆ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅಮೃತ ಹಸ್ತದಿಂದ ಮಹಾಪೂರ್ಣಾಹುತಿ ನೆರವೇರಲಿದೆ. ನಂತರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post