ಉಳ್ಳಾಲ: ಸಂಶಯಪಿಶಾಚಿ ಗಂಡನೊಬ್ಬ ತನ್ನ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಾರು ಎಂಬಲ್ಲಿ ಗುರುವಾರ ಮಧ್ಯಾಹ್ನದ ಹೊತ್ತು ಘಟನೆ ನಡೆದಿದೆ.
ಪಿಲಾರು ನಿವಾಸಿ ಶೋಭಾ ಪೂಜಾರಿ(46) ಮೃತದೇಹ ಮನೆಯ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಪತಿ ಶಿವಾನಂದ ಪೂಜಾರಿ (55) ಮೃತದೇಹ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನುಮಾನ ಸ್ವಭಾವದ ಶಿವಾನಂದ ಪತ್ನಿ ಶೋಭ ಜೊತೆಗೆ ಸಣ್ಣ ಪುಟ್ಟ ವಿಷಯಕ್ಕೂ ಪ್ರತಿದಿನ ಜಗಳವಾಡುತ್ತಿದ್ದರು. ಹಲವರ ಜೊತೆಗೆ ಅನೈತಿಕ ಸಂಬಂಧ ಇದೆ ಎಂದು ಪತ್ನಿಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರು. ಗುರುವಾರ ಬೆಳಗ್ಗೆ ಕೂಡ ಪತ್ನಿಯೊಂದಿಗೆ ಜಗಳವಾಡಿದ್ದರು ಎನ್ನಲಾಗ್ತಿದೆ.
ಶಿವಾನಂದ ಮತ್ತು ಶೋಭಾ ದಂಪತಿಗೆ ಇಬ್ಬರು ಮಕ್ಕಳು. ಮಗಳಿಗೆ ಮದುವೆಯಾಗಿದ್ದರೆ, ಮಗ ಕಾರ್ತಿಕ್ ಕೆಲಸಕ್ಕೆ ಹೋಗುತ್ತಿದ್ದಾನೆ. ಗುರುವಾರ ಮಧ್ಯಾಹ್ನದ ಹೊತ್ತು ಕಾರ್ತಿಕ್ ತನ್ನ ತಾಯಿಗೆ ಕರೆ ಮಾಡಿದ್ದಾನೆ. ಆದರೆ, ಫೋನ್ ಎತ್ತದೆ ಇದ್ದಾಗ ಪಕ್ಕದ ಮನೆಯ ಮಹಿಳೆಯೊಬ್ಬರಿಗೆ ಕರೆ ಮಾಡಿದ್ದಾರೆ.
ಶೋಭಾ ಅವರು ಬೆಳಗ್ಗೆ 10 ಗಂಟೆಯ ಹೊತ್ತಿಗೆ ಈ ಮನೆಗೆ ಬಂದು ಗೊಬ್ಬರ ತೆಗೆದುಕೊಂಡಿದ್ದರು. ಸ್ವಲ್ಪ ಹೊತ್ತಿನಲ್ಲೇ ಕರೆ ಬಂದಿದೆ. ಆಗ ಪಕ್ಕದ ಮನೆಯ ಮಹಿಳೆ ಶೋಭಾ ಅವರ ಹೆಸರು ಕರೆಯುತ್ತಾ ಹೋಗಿದ್ದಾರೆ. ಆದರೆ, ಅವರ ಕರೆಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಮನೆಗೇ ಹೋಗಿ ನೋಡಿದರೆ ಟಿವಿ ಆನ್ ಆಗಿತ್ತು. ಇನ್ನೂ ಒಳಗೆ ಹೋಗಿ ನೋಡಿದರೆ ಮಂಚದಲ್ಲಿ ಶೋಭಾ ಅವರು ಸತ್ತು ಬಿದ್ದಿದ್ದರು.
ಆಗ ಪಕ್ಕದ ಮನೆ ಮಹಿಳೆ ಓಡಿಕೊಂಡು ಹೋಗಿ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದರು. ಈ ನಡುವೆ, ಯಾರೋ ತೋಟದ ಭಾಗದಲ್ಲಿ ಬರುತ್ತಿದ್ದಾಗ ಅಲ್ಲಿ ಶಿವಾನಂದ ಪೂಜಾರಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ನೋಡಿದಾಗಲೇ ಶಿವಾನಂದ ಪೂಜಾರಿ ತನ್ನ ಪತ್ನಿಯ ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಫಾರೆನ್ಸಿಕ್ ತಂಡ ಭೇಟಿ ನೀಡಿ ಎರಡು ಮೃತದೇಹಗಳನ್ನು ಪರಿಶೀಲಿಸುತ್ತಿದ್ದಾರೆ. ಎಸಿಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ತಂಡ ತನಿಖೆ ಕೈಗೆತ್ತಿಕೊಂಡಿದೆ.
ಆತ್ಮಹತ್ಯೆಗೈದ ಶಿವಾನಂದ್ ಡೆತ್ ನೋಟ್ ಬರೆದಿಟ್ಟಿದ್ದು ಪತ್ನಿಯ ಶೀಲ ಸರಿ ಇಲ್ಲ, ನಡತೆ ಕೆಟ್ಟವಳೆಂದು ಬರೆದಿದ್ದಾನೆ. ಅದಕ್ಕೆ ಸಂಬಂಧಿ ಯುವಕನೋರ್ವನ ಭಾವಚಿತ್ರವನ್ನೂ ಲಗತ್ತಿಸಿದ್ದಾನೆ. ಅಲ್ಲದೆ ಅದೇ ಭಾವಚಿತ್ರವನ್ನ ಗೋಡೆಗೂ ಅಂಟಿಸಿದ್ದಾನೆ. ಭಾವಚಿತ್ರದಲ್ಲಿರುವ ಯುವಕ ಶೋಭಾ ಅವರ ಸಂಬಂಧಿಯಾಗಿದ್ದು ಸನ್ನಡತೆಯ ಯುವಕನೆಂದು ಮನೆ ಮಂದಿ ತಿಳಿಸಿದ್ದಾರೆ. ಶೋಭಾ ಅವರು ಗೃಹಿಣಿಯಾಗಿದ್ದು ಮನೆಯಲ್ಲೇ ಬೀಡಿ ಕಟ್ಟುತ್ತಿದ್ದರು. ಅವರ ಕಿರಿಯ ಮಗಳು ಕಾವ್ಯ ವಿವಾಹಿತಳಾಗಿದ್ದು, ಹಿರಿಯ ಮಗ ಕಾರ್ತಿಕ್ ಮಂಗಳೂರಿನ ಮಾಲ್ ಒಂದರಲ್ಲಿ ಕೆಲಸಕ್ಕಿದ್ದಾನೆ. ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಎಸಿಪಿ ದಿನಕರ ಶೆಟ್ಟಿ, ಮಹಾಬಲ ಶೆಟ್ಟಿ ನೇತೃತ್ವದ ವಿಧಿ ವಿಜ್ಞಾನ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post