ಮಂಗಳೂರು, ಅ.21: ಪುತ್ತೂರಿನ ಕ್ಷೇತ್ರ ಅಭಿವೃದ್ಧಿಗೆ ಕಳೆದ ಒಂದು ವರ್ಷದಲ್ಲಿ 1476 ಕೋಟಿ ಅನುದಾನ ಬಂದಿದ್ದು, ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ಎಂಬ ಕನಸು ಹೊತ್ತು 1010 ಕೋಟಿ ವೆಚ್ಚದ ಯೋಜನೆ ಕೈಗೊಂಡಿದ್ದೇನೆ. ಈಗಾಗಲೇ ಈ ಯೋಜನೆಗೆ 400 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಶುರುವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಮ್ಮ ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಬಿಟ್ಟರೆ ದಕ್ಷಿಣ ಕನ್ನಡ ಅತಿ ಹೆಚ್ಚು ತೆರಿಗೆ ನೀಡುವ ಜಿಲ್ಲೆ. ಆದರೆ ಅನುದಾನ ಕೊಡುವುದರಲ್ಲಿ ಕೊನೆಯ ಸ್ಥಾನ ನಮ್ಮದು. ನಾವು ಕೇಳಿಕೊಂಡು ಹೋಗಿ ಅನುದಾನ ಪಡೆದು ತರಬೇಕು. ಜಿಲ್ಲೆಯಾದ್ಯಂತ ಸಮುದ್ರದ ಕಡೆಯಿಂದ ರಿಂಗ್ ರೋಡ್ ಮಾಡಬೇಕೆಂಬ ಕಲ್ಪನೆ ಇದೆ. ಪ್ರತಿವರ್ಷ ಪದವೀಧರರಾಗಿ ಹೊರಬರುವ ಯುವಕ- ಯುವತಿಯರ ಕೈಗೆ ಕೆಲಸ ಕೊಡಬೇಕಾಗಿದೆ. ಪುತ್ತೂರಿನಲ್ಲಿ 300 ಕೋಟಿ ವೆಚ್ಚದಲ್ಲಿ ಎರಡು ಉದ್ಯಮಗಳು ಮುಂದೆ ಬಂದಿದ್ದು ಒಂದಷ್ಟು ಉದ್ಯೋಗ ಸಿಗಲಿವೆ. ಇದರ ಜೊತೆಗೆ, ಪುತ್ತೂರು ತಾಲೂಕಿನಲ್ಲಿ ಡ್ರೈನೇಜ್ ಸಿಸ್ಟಮ್ ಮಾಡುವ ಯೋಜನೆ ಇದೆ.
ಪುತ್ತೂರಿನಲ್ಲಿ ಸರಿಯಾದ ಮೈದಾನ ಇಲ್ಲ. ಮುಂದಿನ ಪೀಳಿಗೆಗೆ ದೈಹಿಕ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸುವ ವ್ಯವಸ್ಥೆ ಇಲ್ಲ ಎಂಬುದನ್ನು ಅರಿತು, 20 ಎಕ್ರೆ ಜಾಗ ಹುಡುಕಿ ಸಿಂಥೆಟಿಕ್ ಟ್ರ್ಯಾಕ್ ಮಾಡಲು ಕೇಂದ್ರಕ್ಕೆ ಪ್ರಸ್ತಾಪ ಇಟ್ಟಿದ್ದೇವೆ. ಕರ್ನಾಟಕ ಕ್ರಿಕೆಟ್ ಅಕಾಡೆಮಿಯಿಂದ ಎರಡು ಮೈದಾನ ಮಾಡುವ ಪ್ರಸ್ತಾಪ ಇಟ್ಟಿದ್ದಾರೆ. ಪುತ್ತೂರು ತಾಲೂಕಿನ ಎಲ್ಲೆಡೆ ರಸ್ತೆ ಬದಿ ಹಣ್ಣಿನ ಮರಗಳನ್ನು ಬೆಳೆಸಲು ಸೂಚನೆ ನೀಡಿದ್ದೇನೆ. ಕಾಟು ಮಾವಿನ ಹಣ್ಣು, ನೇರಳೆ, ಪುನರ್ಪುಳಿ ಹೀಗೆ ಹಣ್ಣಿನ ಮರಗಳ ಗಿಡವನ್ನು ನೆಡುವುದಕ್ಕೆ ವ್ಯವಸ್ಥೆ ಮಾಡಿದ್ದೇನೆ. ಹೈದರಾಬಾದ್ ನಿಂದ ರೋಕೊಮಿಲ್ಲಾ ಗಿಡ ತಂದು ನೆಡುತ್ತಿದ್ದೇವೆ. ಹಣ್ಣಿನ ಗಿಡಗಳಾದರೆ, ಹಕ್ಕಿಗಳು, ಇನ್ನಿತರ ಜೀವಿಗಳಿಗೆ ಆಹಾರವಾಗುತ್ತದೆ. ರಸ್ತೆ ಬದಿಯ ಗಿಡಗಳನ್ನು ಕದ್ದೊಯ್ಯುವ ಕೆಲಸ ಮಾಡಬೇಡಿ, ಬೇಕಾದರೆ ಗಿಡವನ್ನು ತಂದು ಕೊಡುತ್ತೇವೆ ಎಂದು ಅಶೋಕ್ ರೈ ಮನವಿ ಮಾಡಿದರು.
ಮೆಡಿಕಲ್ ಕಾಲೇಜು ಇಲ್ಲದೆ ಪುತ್ತೂರು, ಸುಳ್ಯ, ಬೆಳ್ತಂಗಡಿಯವರು ತುರ್ತು ಅಗತ್ಯಕ್ಕೆ ಮಂಗಳೂರಿಗೆ ಬರಬೇಕಾದ ಸ್ಥಿತಿಯಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ದೂರದಿಂದ ಬಂದು ಹಿಂತಿರುಗಿ ಹೋಗುವಾಗ ಹೆಣವೇ ಆಗುವ ಸ್ಥಿತಿಯಿದೆ. ಇದರ ಜೊತೆಗೆ, ಪುತ್ತೂರಿಗೆ ಮೆಡಿಕಲ್ ಕಾಲೇಜು ಸಿಗಬೇಕೆಂಬ ಕನಸು ಇದೆ. ಕಾಲೇಜು ನಿರ್ಮಾಣಕ್ಕಾಗಿ ತಾಲೂಕಿನಲ್ಲಿ 40 ಎಕ್ರೆ ಜಾಗ ನೋಡಿದ್ದೇವೆ. ಆಯುಷ್ ಇಲಾಖೆಯಡಿ 15 ಕೋಟಿ ವೆಚ್ಚದಲ್ಲಿ 50 ಆಸ್ಪತ್ರೆ ಬೆಡ್ ಮಾಡಿಸಲು ಯೋಜನೆ ಹಾಕಿದ್ದೇನೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಪ್ರತ್ಯೇಕ ಪ್ಲಾನ್ ಮಾಡಿದ್ದು, ಕೇಂದ್ರ ಪ್ರವಾಸೋದ್ಯಮ ಇಲಾಖೆಯಡಿ 50 ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಿದ್ದೇನೆ ಎಂದರು. ಯಾವುದೇ ಶಾಸಕರಿಗೂ ಅನುದಾನ ಸಿಗಲ್ಲವೆಂದು ಇರಲ್ಲ. ನಾವು ಫಾಲೋ ಅಪ್ ಮಾಡಬೇಕಷ್ಟೇ. ಯಾವುದೇ ಕ್ಷೇತ್ರಕ್ಕೆ 68 ಕಿಮೀ ರಸ್ತೆ ಅಭಿವೃದ್ಧಿಗೆ ಅವಕಾಶ ಇರುತ್ತದೆ. ಇದರಲ್ಲಿ 38 ಕಿಮೀ ಅಭಿವೃದ್ಧಿಗೆ ಹೇಗೂ ಅನುದಾನ ಬರುತ್ತದೆ. ಟ್ಯಾಲೆಂಟ್ ಇದ್ದರೆ ಮತ್ತಷ್ಟು ಅನುದಾನ ತರಲು ಸಾಧ್ಯವಾಗುತ್ತದೆ. ಕನಿಷ್ಠ ಮೂರು ಕಿಮೀನಿಂದ 5 ಕಿಮೀ ಅಭಿವೃದ್ಧಿಗೆ ಅನುದಾನ ಬರುತ್ತದೆ. ನಾವು ಬೇಕಾದ ರೀತಿ ಬಳಸಿಕೊಳ್ಳಬೇಕು ಎಂದು ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post