ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆಯೆತ್ತಿ ನಿಂತಿರುವ ಪ್ರಜಾಪ್ರಭುತ್ವದ ನೂತನ ದೇಗುಲ ‘ಸಂಸತ್ ಭವನ’ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು. ಇಂದು ಬೆಳಗ್ಗೆ 7.15 ಕ್ಕೆ ಸಾಂಪ್ರದಾಯಿಕ ಬಿಳಿ ಉಡುಗೆಯಲ್ಲಿ ಪ್ರಧಾನಿ ಮೋದಿ ಅವರು ಗೇಟ್ ನಂ.1 ರಿಂದ ಸಂಸತ್ ಆವರಣಕ್ಕೆ ಆಗಮಿಸಿದರು. ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ಮಹಾತ್ಮ ಗಾಂಧಿ ಪ್ರತಿಮೆ ಪಕ್ಕದಲ್ಲಿ ಆಯೋಜಿಸಿದ್ದ ಪೂಜಾ ವಿಧಾನಗಳಲ್ಲಿ ಇಬ್ಬರೂ ಭಾಗಿಯಾದರು. ಕರ್ನಾಟಕದ ಶೃಂಗೇರಿ ಮಠದ ಪುರೋಹಿತರು ವೇದ ಘೋಷಗಳನ್ನು ಪಠಿಸಿದರು. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭ ಸಾಂಘವಾಗಿ ನಡೆಯಲು “ಗಣಪತಿ ಹೋಮ” ನಡೆಸಲಾಯಿತು.


ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ನಿಗದಿಪಡಿಸಲಾಗಿದ್ದ ವಿಶೇಷ ಆವರಣದಲ್ಲಿ ರಾಜದಂಡವನ್ನು ಸ್ಪೀಕರ್ ಓಂ ಬಿರ್ಲಾ ಅವರ ಸಮೇತ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ ಇಡಲಾಗಿದ್ದ ಜ್ಯೋತಿಯನ್ನ ಬೆಳಗಿಸುವ ಮೂಲಕ ನೂತನ ಸಂಸತ್ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು.
ಸೆಂಗೋಲ್ ಸ್ಥಾಪನೆಯ ಬಳಿಕ ಅಲ್ಲಿಂದ ಹೊರಬಂದ ಪ್ರಧಾನಿ ಮೋದಿ ಅವರು, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕೆಲ ಕಾರ್ಮಿಕರಿಗೆ ಗೌರವ ಸಲ್ಲಿಸಿದರು. ಶಾಲು ಮತ್ತು ಸ್ಮರಣಿಗೆ ನೀಡಿ ಅವರನ್ನು ಸನ್ಮಾನಿಸಿದರು. ಬಳಿಕ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಗುರುತಿಸಲು ಫಲಕವೊಂದನ್ನು ಮೋದಿಯವರು ಅನಾವರಣಗೊಳಿಸಿದರು.
ಇದಾದ ಬಳಿಕ ಸಂಸತ್ನ ಲಾಬಿಯಲ್ಲಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು. ಹಿಂದೂ, ಮುಸ್ಲಿಂ, ಜೈನ, ಬೌದ್ಧ, ಕ್ರೈಸ್ತ ಧರ್ಮ ಸೇರಿದಂತೆ ಎಲ್ಲ ಧರ್ಮಗಳ ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ನೂತನ ಸಂಸತ್ ಕಟ್ಟಡವು ಐತಿಹಾಸಿಕ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಎಸ್ ಜೈಶಂಕರ್ ಮತ್ತು ಜಿತೇಂದ್ರ ಸಿಂಗ್, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post