ಮಂಗಳೂರು: ಪಿಎಫ್ಐ ಮತ್ತು ಸಹವರ್ತಿ ಸಂಸ್ಥೆಗಳನ್ನು ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಇಂದು ಮಂಗಳೂರು ನಗರದಲ್ಲಿರುವ ಪಿಎಫ್ಐ ಜಿಲ್ಲಾ ಕಚೇರಿಗೆ ನಗರ ಪೊಲೀಸರು ಬೀಗಮುದ್ರೆ ಹಾಕಿದರು. ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಯನ್ನು ಪರಿಶೀಲನೆ ಮಾಡಿ ಸೀಜ್ ಮಾಡಿ ಬೀಗಮುದ್ರೆ ಹಾಕಲಾಗಿದೆ. ಕಳೆದ ಎರಡು ದಿನಗಳಿಂದ ಪಿಎಫ್ಐ ಕಚೇರಿಗೆ ಬೀಗ ಹಾಕಿ ಇದ್ದು, ಇಂದು ಕಚೇರಿ ಬೀಗ ಒಡೆದು ಪೊಲೀಸರು ತಪಾಸಣೆ ನಡೆಸಿದ್ದಾರೆ. ಬಳಿಕ ಬೀಗ ಜಡಿದು ಸೀಲ್ ಮಾಡಿದರು. ಈ ವೇಳೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಪಿಎಫ್ಐ ಜಿಲ್ಲಾ ಕಚೇರಿಗೆ ಬೀಗ ಹಾಕಲು ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ನಗರದ ಮೂರು ಉಪವಿಭಾಗದಲ್ಲಿ ಕಾರ್ಯಾಚರಣೆ ನಡೆಸಿ ಕಚೇರಿಯಲ್ಲಿನ ವಸ್ತುಗಳನ್ನು ಸೀಜ್ ಮಾಡಿ ಕಚೇರಿಗೆ ಸೀಲ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಕಾರ್ಯಾಚರಣೆಗೆ ಮುನ್ನ ನೆಲ್ಲಿಕಾಯಿ ರಸ್ತೆ ಹಾಗೂ ಅಝೀಝುದ್ದೀನ್ ರಸ್ತೆಯನ್ನು ಎರಡೂ ಕಡೆಯಿಂದ ವಾಹನ ಸಂಚಾರಕ್ಕೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಸಂಜೆ 4ಕ್ಕೆ ಪೊಲೀಸರು ನಗರದ ನೆಲ್ಲಿಕಾಯಿ ರಸ್ತೆಯ ಪಿಎಫ್‌ಐ ಕಚೇರಿಗೆ ತೆರಳಿದಾಗ ಕಚೇರಿ ಪ್ರವೇಶದ ಮುಖ್ಯಗೇಟ್‌ಗೆ ಬೀಗ ಹಾಕಲಾಗಿತ್ತು. ಒಳಗಡೆ ಯಾರೂ ಇರಲಿಲ್ಲ. ಆದಾಗ್ಯೂ ಬೀಗ ಮುರಿದು ಒಳಪ್ರವೇಶಿಸಿದ ಪೊಲೀಸರು ಸರಕಾರಿ ಪಂಚರ ಸಮಕ್ಷಮದಲ್ಲಿ ಕಚೇರಿಯ ಒಳಗಿದ್ದ ದಾಖಲೆ ಪತ್ರಗಳ ಸಹಿತ ವಸ್ತುಗಳನ್ನು ಜಫ್ತಿ ಮಾಡಿ ಬಳಿಕ ಕಚೇರಿ ಬಾಗಿಲಿಗೆ ಬೀಗ ಜಡಿದರು. ಈ ವೇಳೆ ಬಂದರ್ ಅಝೀಝುದ್ದೀನ್ ರಸ್ತೆಯಲ್ಲಿದ್ದ ಸಿಎಫ್‌ಐ ಕಚೇರಿಯಿಂದಲೂ ದಾಖಲೆಪತ್ರಗಳನ್ನು ವಶಪಡಿಸಿ ಕಚೇರಿಗೆ ಬೀಗಮುದ್ರೆ ಹಾಕಲಾಯಿತು ಎಂದು ತಿಳಿದು ಬಂದಿದೆ.


ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿರುವ ಪಿಎಫ್‌ಐ ಮತ್ತು ಸಿಎಫ್‌ಐ ಕಚೇರಿಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸೆ.22ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದ.ಕ. ಜಿಲ್ಲೆಯ 11 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಐದು ಮಂದಿ ಪಿಎಫ್‌ಐ ಮುಖಂಡರನ್ನು ಬಂಧಿಸಿದ್ದರು. ಬಳಿಕ ಪೊಲೀಸರು ಜಿಲ್ಲೆಯ 15 ಮಂದಿ ಪಿಎಫ್‌ಐ ಮುಖಂಡರನ್ನು ಬಂಧಿಸಿದ್ದರು. ಕೇಂದ್ರ ಸರಕಾರವು ಬುಧವಾರ ಪಿಎಫ್‌ಐ ಸಹಿತ 8 ಸಂಘಟನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಸಂಘಟನೆಗಳ ಕಚೇರಿಗೆ ಬೀಗ ಜಡಿದಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post