ಸುರತ್ಕಲ್, ಸೆ. 27: ಇಲ್ಲಿನ ಭಾರ್ಗವಿ ಫೈನಾನ್ಸ್ ಮತ್ತು ಚಿಟ್ ಫಂಡ್ ನಡೆಸಿ ಅಮಾಯಕರಿಗೆ ವಂಚಿಸಿದ ಪ್ರಕರಕ್ಕೆ ಸಂಬಂಧಿಸಿ ಭಾರ್ಗವಿ ಫೈನಾನ್ಸ್ ಮಾಲಕ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ ರನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ. ಭಾರ್ಗವಿ ಫೈನಾನ್ಸ್ ಮತ್ತು ಚಿಟ್ ಫಂಡ್ ಮಾಡಿ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ ಮತ್ತು ಪುತ್ರಿ ಪ್ರಿಯಾಂಕ ಭಟ್ ಎಂಬವರು ಕೋಟ್ಯಂತರ ರೂ. ವಂಚಿಸಿದ್ದಾರೆ ಎಂದು ಸುರತ್ಕಲ್ ಮೂಲದ ದೀಪಕ್ ಕುಮಾರ್ ಶೆಟ್ಟಿ ಎಂಬವರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಸೆನ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಭಾರ್ಗವಿ ಫೈನಾನ್ಸ್ ಮಾಲಕ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ ರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 5 ದಿನಗಳ ಕಾಲ ಸೆನ್ ಪೊಲೀಸ್ ಅಧಿಕಾರಿಗಳ ಕಸ್ಟಡಿಗೆ ನೀಡಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ವಂಚನೆಯ ಬಗ್ಗೆ ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ದೀಪಕ್ ಕುಮಾರ್ ಶೆಟ್ಟಿ, 15 ವರ್ಷಗಳಿಂದ ಭಾರ್ಗವಿ ಫೈನಾನ್ಸ್ ನಲ್ಲಿ ವ್ಯವಹಾರ ಮಾಡಿಕೊಂಡಿದ್ದೇನೆ. 10 ಲಕ್ಷ ರೂಪಾಯಿ ಮೌಲ್ಯದ ಚಿಟ್ ಫಂಡಿಗೆ ಸೇರಿದ್ದು ಪ್ರತಿದಿನ 1,500 ರೂ.ನಂತೆ ತಿಂಗಳಿಗೆ 50,000 ರೂ.ನಂತೆ ಕಟ್ಟಿದ್ದೇನೆ. ಕಳೆದ ಮಾರ್ಚ್ ನಲ್ಲಿ ಚಿಟ್ ಫಂಡ್ ಮುಕ್ತಾಯ ಆಗಿದ್ದು ಹತ್ತು ಲಕ್ಷ ಆಗಬೇಕು. ಇಲ್ಲಿವರೆಗೂ ನನಗೆ ಹಣ ನೀಡಿಲ್ಲ, ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದರು. ಇವರ ಜೊತೆಗೆ 20ಕ್ಕೂ ಹೆಚ್ಚು ಮಂದಿ ತಮಗಾದ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಗೆ ಬಂದಿದ್ದ ಪಿಗ್ಮಿ ಕಲೆಕ್ಟರ್ ಯಕ್ಷಿತ್ ಮಾತನಾಡಿ, ಒಂದೂವರೆ ವರ್ಷಗಳಿಂದ ಫೈನಾನ್ಸ್ ನಲ್ಲಿ ಹಣ ಸಂಗ್ರಾಹಕನಾಗಿ ದುಡಿಯುತ್ತಿದ್ದು ಹಲವರನ್ನು ಚಿಟ್ ಫಂಡ್‌ಗೆ ಸೇರಿಸಿದ್ದೇನೆ. ಫೈನಾನ್ಸ್ ಎಂಟು ತಿಂಗಳಿಂದ ಮುಚ್ಚಿದ್ದು, ಗ್ರಾಹಕರು ಹಣ ಕೇಳುತ್ತಿದ್ದಾರೆ. ನನಗೆ 4 ತಿಂಗಳಿಂದ ಸಂಬಳ ನೀಡಿಲ್ಲ. ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
Discover more from Coastal Times Kannada
Subscribe to get the latest posts sent to your email.








Discussion about this post