ಮಂಗಳೂರು: ಅತ್ಯಾಚಾರಗೈದ ಅಪರಾಧಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು 10 ವರ್ಷಗಳ ಕಠಿನ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ. ಪುತ್ತೂರು ತಾಲೂಕು ಕುಟ್ರಾಪ್ಪಾಡಿ ಗ್ರಾಮದ ಜಗನ್ನಾಥ್ ಕೆ. ಮೊಗೇರ (38) ಶಿಕ್ಷೆಗೊಳಗಾದವನು.
ಈತ ಯುವತಿಯ ಮೇಲೆ ಅತ್ಯಾಚಾರವೆಸಗಿದ ಬಗ್ಗೆ 2016ರ ಫೆ. 25ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆಯಲ್ಲಿ ಯುವತಿ ಮಾತ್ರ ಇದ್ದಾಗ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಬಂದಿದ್ದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಅನಂತರವೂ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರವೆಸಗಿದ್ದ. ಯುವತಿ ಗರ್ಭಿಣಿಯಾದಾಗ ಮನೆಯವರಿಗೆ ಗೊತ್ತಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು. ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ 9 ಮಂದಿ ಸಾಕ್ಷಿದಾರರನ್ನು ವಿಚಾರಿಸಿ 20 ದಾಖಲೆಗಳನ್ನು ಗುರುತಿಸಲಾಗಿತ್ತು. ಆರೋಪಿಯ ಕೃತ್ಯ ಸಾಬೀತಾಗಿರುವುದನ್ನು ತೀರ್ಮಾನಿಸಿದ ನ್ಯಾಯಾಧೀಶರು ಭಾರತೀಯ ದಂಡ ಸಂಹಿತೆಯ ಕಲಂ 376ರಡಿ 10 ವರ್ಷಗಳ ಕಠಿನ ಕಾರಾಗೃಹ ವಾಸದ ಶಿಕ್ಷೆ ಮತ್ತು 5,000 ರೂ. ದಂಡ, ಕಲಂ 506ರಡಿ 5 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 2 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಪ್ರಾಸಿಕೂಷನ್ ಪರವಾಗಿ ಸರಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಅವರು ವಾದಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post