ಮಂಗಳೂರು, ಡಿ.27: ಬೋಳಾರದ ಸಿಟಿ ಬೀಚ್ ನಲ್ಲಿ ಏರ್ಪಡಿಸಲಾಗಿದ್ದ ಇಸ್ರೇಲ್ ಮೂಲದ ಖ್ಯಾತ ಡಿಜೆ ಆರ್ಟಿಸ್ಟ್ ಸಜಂಕಾ ಡಿಜೆ ಪಾರ್ಟಿಯನ್ನು ಕೊನೆಕ್ಷಣದಲ್ಲಿ ರದ್ದು ಪಡಿಸಲಾಗಿದೆ. ಹಿಂದು ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಸಜಂಕಾ ಪಾರ್ಟಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಆಯೋಜಕರು ಸಜಂಕಾ ಬದಲು ಬೇರೆ ಆರ್ಟಿಸ್ಟ್ ಮೂಲಕ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ.
ಹೊಸ ವರ್ಷದ ಪ್ರಯುಕ್ತ ಮಂಗಳೂರಿನ ಟಾಪ್ ಹೌಸ್ ರೆಸ್ಟೋರೆಂಟ್ ಮಾಲೀಕರು ಅದ್ದೂರಿ ಡಿಜೆ ಪಾರ್ಟಿಯನ್ನು ಆಯೋಜಿಸಿದ್ದರು. ಡಿಜೆ ಪಾರ್ಟಿಗೆ ಇಸ್ರೇಲ್ ಮೂಲದ ಖ್ಯಾತ ಆರ್ಟಿಸ್ಟ್ ಸಜಂಕಾ ಬರುವುದೆಂದು ನಿಗದಿಯಾಗಿತ್ತು. ಹಿಂದು ಸಂಘಟನೆಗಳ ವಿರೋಧ ನಡುವೆಯೂ ಸಂಘಟಕರು ಮೇಲಿನ ಲೆವೆಲಲ್ಲಿ ಮಾತುಕತೆ ಮಾಡಿ ಡಿ.27ರ (ಇಂದು) ರಾತ್ರಿಗೆ ಪಾರ್ಟಿ ಆಯೋಜಿಸಿದ್ದರು.
ಡಿಜೆ ಪಾರ್ಟಿಗಳಲ್ಲಿ ಡ್ರಗ್ಸ್ ಮಾಫಿಯಾದಿಂದಾಗಿ ಯುವಕ ಯುವತಿಯರ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಅಪಾಯವಿದೆ. ಅಲ್ಲದೆ ಸಜಂಕಾ ಹಿಂದೂ ದೇವರ ಬಗ್ಗೆ ವಿಡಂಬನೆ ಮಾಡಿದ್ದಾರೆ. ಹಾಗಾಗಿ ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಪೊಲೀಸ್ ಇಲಾಖೆಗೆ ಮನವಿ ಮಾಡಿತ್ತು. ಸಜಂಕಾ ಕಾರ್ಯಕ್ರಮ ನಡೆದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸಜಂಕಾ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಸಜಂಕಾ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದರೂ ಕಾರ್ಯಕ್ರಮ ನೀಡದೆ ಹೊಟೇಲ್‌ನಲ್ಲೇ ವಾಸ್ತವ್ಯವಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post