ಮಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ವಿಶೇಷ ವಾಹನದಲ್ಲಿ ಸಾಗುತ್ತಾ ರಸ್ತೆಯ ಇಕ್ಕೆಲದಲ್ಲಿ ಕೇಸರಿ ಧ್ವಜ ಹಿಡಿದು ನಿಂತಿದ್ದ ಜನರತ್ತ ಕೈ ಬೀಸುತ್ತಾ ಸಾಗಿದರು. ನಗರದ ಪುರಭವನದಿಂದ ಹೊರಟ ಅವರ ರೋಡ್ ಶೋ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಜನಸೇರಿದ್ದರು. ನೇಸರ ಅಸ್ತಮಿಸುವ ಹೊತ್ತಿನಲ್ಲಿ ಪಡುವಣದ ಆಗಸ ಕೆಂಪುಗಟ್ಟಿದ್ದರೆ, ನಗರದ ಮೈದಾನ ರಸ್ತೆ, ಕಾರ್ನಾಡ್ ಸದಾಶಿವ ರಾಯ ರಸ್ತೆ ‘ಕೇಸರಿ’ಮಯವಾಗಿತ್ತು.
ರಸ್ತೆಯುದ್ದಕ್ಕೂ ಹಾರಾಡುತ್ತಿದ್ದ ಬಿಜೆಪಿಯ ಧ್ವಜಗಳು ಕೇಸರಿ ಅಲೆಯನ್ನೇ ಸೃಷ್ಟಿಸಿದ್ದವು. ಕುದ್ಮುಲ್ ರಂಗರಾವ್ ಪುರಭವನದ ಬಳಿಯಿಂದ ಹೊರಟ ಅಮಿತ್ ಶಾ ಅವರಿದ್ದ ವಾಹನ ಸಾಗಿ ಬರುತ್ತಿದಂತೆಯೇ ಮೊಳಗಿದ ಜಯಘೋಷ ಪಕ್ಷದ ಕಾರ್ಯಕರ್ತ ರಲ್ಲಿ ಹುಮ್ಮಸ್ಸು ಮೂಡಿಸಿತ್ತು. ಹುಲಿವೇಷಧಾರಿಗಳ ಕಸರತ್ತು, ರೋಡ್ ಶೊ ದ ವಿಶೇಷ ಆಕರ್ಷಣೆಯಾಗಿತ್ತು. ಕೆಲ ಯುವಕರು ತುಳುವರ ಅಸ್ಮಿತೆಯಾದ, ಸೂರ್ಯ ಚಂದ್ರದ ಲಾಂಛನ ಇರುವ ಕೆಂಬಣ್ಣದ ಧ್ವಜವನ್ನೂ ಬೀಸಿದರು. ಅಮಿತ್ ಷಾ ಅವರು ಮಂಗಳೂರಿನ ಅಭ್ಯರ್ಥಿ ವೇದವ್ಯಾಸ ಕಾಮತ್ ಪರವಾಗಿ ಮತ ಕೇಳುವುದಕ್ಕಾಗಿ ಆಗಮಿಸಿದ್ದಾರೆ. ಬಿಜೆಪಿಗೆ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಹೇಳುತ್ತಾ ಸಾಗಿದರು
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಹಾಗೂ ಪಕ್ಷದ ಮುಖಂಡರು ವಾಹನದಲ್ಲಿ ಇದ್ದರು
Discover more from Coastal Times Kannada
Subscribe to get the latest posts sent to your email.
Discussion about this post