ಮಂಗಳೂರು, ಎ.29 : ನಗರದ ಕುಡುಪು ದೇವಸ್ಥಾನದ ಬಳಿಯ ಮೈದಾನದಲ್ಲಿ ವ್ಯಕ್ತಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರಕರಣ ನಾನಾ ರೀತಿಯ ಶಂಕೆಗೀಡಾದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದು ಗುಂಪು ಹಲ್ಲೆಯಿಂದ ಆಗಿರುವ ಕೃತ್ಯವೆಂದು ಕೇಸು ದಾಖಲಿಸಿದ್ದಲ್ಲದೆ, 15 ಮಂದಿಯನ್ನು ಬಂಧಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕುಡುಪು ಬಳಿಯ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ಎಪ್ರಿಲ್ 27ರಂದು ಕ್ರಿಕೆಟ್ ಪಂದ್ಯಾಟ ನಡೆದಿತ್ತು. ಅಪರಾಹ್ನ 2 ಗಂಟೆ ವೇಳೆಗೆ ಉತ್ತರ ಭಾರತ ಮೂಲದ ಕಾರ್ಮಿಕ ಎನ್ನಲಾದ ಯುವಕ ಸ್ಥಳಕ್ಕೆ ಬಂದಿದ್ದ. ಸ್ಥಳದಲ್ಲಿದ್ದ ಯುವಕರ ಜೊತೆಗೆ ವಾಗ್ವಾದ ಏರ್ಪಟ್ಟಿದ್ದು ಬಳಿಕ ಯುವಕರು ಸೇರಿ ಥಳಿಸಿದ್ದಾರೆ ಎನ್ನಲಾಗಿತ್ತು. ಯುವಕ ರಾತ್ರಿ ವೇಳೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಘಟನೆ ಹಿನ್ನೆಲೆಯಲ್ಲಿ ಸಂಶಯಾಸ್ಪದ ಸಾವು ಎಂದಷ್ಟೇ ಗ್ರಾಮಾಂತರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಗುಂಪು ಹಲ್ಲೆ ಆಗಿರುವ ಬಗ್ಗೆ ವದಂತಿಗಳು ಸೃಷ್ಟಿಯಾಗಿದ್ದವು. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು.
ಶವದ ಪೋಸ್ಟ್ ಮಾರ್ಟಂ ವರದಿಯಲ್ಲಿ ಬೆನ್ನಿನ ಭಾಗಕ್ಕೆ ಬಿದ್ದ ತೀವ್ರ ಏಟಿನಿಂದ ಹೊಟ್ಟೆಯೊಳಗೆ ಉಂಟಾದ ರಕ್ತಸ್ರಾವ ಮತ್ತು ಅದರಿಂದಾದ ಶಾಕ್, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವು ಸಂಭವಿಸಿದ್ದಾಗಿ ವೈದ್ಯರು ತಿಳಿಸಿದ್ದರು. ಇದೇ ವೇಳೆ, ಸ್ಥಳೀಯರ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯದಲ್ಲಿ 25 ಮಂದಿಯಷ್ಟು ಭಾಗಿಯಾಗಿದ್ದಾರೆ. ಕೈಯಿಂದ ಮತ್ತು ಕಟ್ಟಿಗೆಯಿಂದ ಯದ್ವಾತದ್ವಾ ಹಲ್ಲೆ ನಡೆಸಿರುವುದು ಮತ್ತು ಕಾಲಿನಿಂದ ತುಳಿದು ಹಲ್ಲೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಕೆಲವರು ತಡೆದರೂ ನಿರಂತರವಾಗಿ ಗುಂಪು ಸೇರಿ ಹಲ್ಲೆ ನಡೆಸಿದ್ದರಿಂದ ಯುವಕನ ಸಾವು ಸಂಭವಿಸಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ದೀಪಕ್ ಕುಮಾರ್ ಎಂಬವರು 19 ಜನರು ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 37/2025, ಕಲಂ 102 (2), 189 (2),191 (1), 191(3), 240 ಭಾರತೀಯ ನ್ಯಾಯ ಸಂಹಿತೆ 2023 (ಬಿಎನ್‌ಎಸ್ 2023) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಥಮ ಬಾರಿಗೆ ಕಾನೂನಿನಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆತ ಉತ್ತರಭಾರತ ಮೂಲದ ಕಾರ್ಮಿಕ ಎಂದು ಹೇಳಲಾಗಿದ್ದರೂ ಆತ ಮಲಯಾಳಂ ಮಾತನಾಡುತ್ತಿದ್ದ ಎನ್ನಲಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post