ಬೆಂಗಳೂರು, ಮೇ 29: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಒಂದಾದ ಮೇಲೊಂದು ಎನ್ನುವಂತೆ ಹಿಂದೂ-,ಮುಸ್ಲಿಮರು ಹತ್ಯೆಗಳು ಆಗುತ್ತಿದ್ದು, ಕಾನೂನು ವ್ಯವಸ್ಥೆ ಕಾಪಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಬಂಟ್ವಾಳದಲ್ಲಿ ಅಬ್ದುಲ್ ರಹಿಮ್ ಹತ್ಯೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಎತ್ತಂಗಡಿ ಮಾಡಿದೆ. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಹಾಗೂ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಅವರನ್ನು ವರ್ಗಾವಣೆ ಇಂದು(ಮೇ 29) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರವಾಲ ಅವರನ್ನು ಕ್ರಿಮಿನಲ್ ಇನ್ವೆ,ಸ್ಟಿಗೇಶನ್ ಡಿಪಾರ್ಟ್ ಮೆಂಟ್ ಗೆ ವರ್ಗಾಯಿಸಲಾಗಿದೆ. ಇನ್ನು ಮಂಗಳೂರು ಪೊಲೀಸ್ ನೂತನ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಅವರನ್ನ ನೇಮಕ ಮಾಡಲಾಗಿದೆ. ಇನ್ನು ಉಡುಪಿ ಎಸ್ಪಿಯಾಗಿದ್ದ ಅರುಣ್.ಕೆ ಅವರನ್ನು ದಕ್ಷಿಣ ಕನ್ನಡ ಪೊಲಿಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಇನ್ನೊಂದೆಡೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಮ್ ಶಂಕರ್ ಅವರನ್ನ ನೇಮಕ ಮಾಡಲಾಗಿದೆ.
ಈ ವರ್ಗಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಈ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಗೃಹ ಸಚಿವ ಪರಮೇಶ್ವರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು. ಈ ಸಭೆಯಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಬಗ್ಗೆ ಸುದೀರ್ಘಟವಾಗಿ ಚರ್ಚೆ ಮಾಡಿದ್ದು, ಜಿಲ್ಲೆಯಲ್ಲಿ ಕಾನುನು ಸುವ್ಯವಸ್ಥೆ ಬಿಗಿಗೊಳಿಸುವ ಸಂಬಂಧ ಮಹತ್ವದ ಮಾತುಕತೆಯಾಗಿದೆ.
ಸುಧೀರ್ ಕುಮಾರ್ ರೆಡ್ಡಿ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಾರಾವ್ ಪೇಟೆಯವರಾದ ಸುಧೀರ್ ಕುಮಾರ್ ರೆಡ್ಡಿ 2010 ರ ಬ್ಯಾಚ್ ಐಪಿಎಸ್ ಅಧಿಕಾರಿ. ಅವರು ಪುದುಚೇರಿ ಇಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ ಪದವಿ ಪಡೆದಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಹಿಂದೆ ಬೀದರ್ ಮತ್ತು ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆಗಳ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಆ ಬಳಿಕ ಕರ್ನಾಟಕ ಕೇಡರ್ ನಿಂದ ಆಂಧ್ರಪ್ರದೇಶ ಕೇಡರ್ ಗೆ ಡೆಪ್ಟೇಷನ್ ಮೇಲೆ ತೆರಳಿದ್ದ ಅವರು ಮೊದಲು ವಿಜಯವಾಡ, ನಂತರ ಕರ್ನೂಲ್ ಎಸ್‌ಪಿಯಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ಎಸ್‌ಪಿಯಾಗಿ, ನಂತರ ಪೂರ್ವ ಗೋದಾವರಿ ಜಿಲ್ಲೆ ಉಸ್ತುವಾರಿ, ಬಳಿಕ ಪೂರ್ಣಾವಧಿ ಎಸ್‌ಪಿಯಾಗಿ ಕೆಲಸ ಮಾಡಿದ್ದರು.
ಡಾ.ಅರುಣ್ ಕೆ: ತಮಿಳುನಾಡಿನ 2014 ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾದ ಡಾ. ಅರುಣ್, ಪುದುಚೇರಿ ಮೆಡಿಕಲ್ ಸೈನ್ಸ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ, ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸಿಐಡಿ ಸೈಬರ್ ಅಪರಾಧ ವಿಭಾಗದ ಡಿಐಜಿ ಬೋರಸೆ ಭೂಷಣ್ ಗುಲಾಬ್ ರಾವ್ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post