ನವದೆಹಲಿ, ಜುಲೈ 29: ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಯೆಮನ್‌ನಲ್ಲಿ ಮರಣದಂಡನೆಯನ್ನು ಎದುರಿಸುತ್ತಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಗಲ್ಲು ಶಿಕ್ಷೆಯಿಂದ ಮುಕ್ತಿಗೊಳಿಸಲಾಗಿದೆ. ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಈಗ ಶಾಶ್ವತವಾಗಿ ರದ್ದುಪಡಿಸಲಾಗಿದೆ. ಈ ಸಂಬಂಧದ ಮಾಹಿತಿಯನ್ನು ಭಾರತೀಯ ಗ್ರ್ಯಾಂಡ್ ಮುಫ್ತಿ, ಕಾಂತಪುರಂ ಎಪಿ ಅಬುಬಕ್ಕರ್ ಮುಸ್ಲೈಯರ್ ಅವರ ಕಚೇರಿ ಹಂಚಿಕೊಂಡಿದೆ. ಇದಕ್ಕೂ ಮೊದಲು, ಯೆಮನ್‌ನಲ್ಲಿನ ಅಧಿಕಾರಿಗಳು ರಾಜತಾಂತ್ರಿಕ ಮಧ್ಯಸ್ಥಿಕೆಗಳ ನಂತರ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಮುಂದೂಡಿದ್ದರು. ಈ ನಿಮಿಷಾ ಪ್ರಿಯಾ ಪ್ರಕರಣ ಇಡೀ ಜಗತ್ತಿನಾದ್ಯಂತ ಚರ್ಚೆಯಾಗಿತ್ತು.
ಜುಲೈ 16ರಂದು ನಿಮಿಷಾ ಪ್ರಿಯಾಳಿಗೆ ನೇಣಿಗೇರಿಸಲು ದಿನ ನಿಗದಿಯಾಗಿತ್ತು. ಆದರೆ, ಭಾರತ ಸರ್ಕಾರದ ಮನವಿ ಹಾಗೂ ಧಾರ್ಮಿಕ ಮುಖಂಡರ ಮಧ್ಯಸ್ಥಿಕೆಯ ಬಳಿಕ ಆ ಗಲ್ಲು ಶಿಕ್ಷೆ ಮುಂದೂಡಲ್ಪಟ್ಟಿತ್ತು. ಭಾರತ ಸರ್ಕಾರ ಮತ್ತು ಗ್ರ್ಯಾಂಡ್ ಮುಫ್ತಿ ಅಬು ಬಕರ್ ಅಹ್ಮದ್ ಸೇರಿದಂತೆ ಹಲವಾರು ಧಾರ್ಮಿಕ ಮುಖಂಡರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದರು. ಯೆಮನ್‌ನ ಹೌತಿ ಅಧಿಕಾರಿಗಳು ಈ ಹಿಂದೆ ಗಲ್ಲು ಶಿಕ್ಷೆಯನ್ನು ಅಮಾನತುಗೊಳಿಸಿದ್ದರು. ಈಗ ಅದನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ನಿಮಿಷಾ ಅವರಿಗೆ ಮರುಜೀವ ಸಿಕ್ಕಿದೆ.
“ಈ ಹಿಂದೆ ಅಮಾನತುಗೊಂಡಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಯಿತು” ಎಂದು ಗ್ರ್ಯಾಂಡ್ ಮುಫ್ತಿ ಹೇಳಿಕೆಯನ್ನು ಉಲ್ಲೇಖಿಸಿ ANI ವರದಿ ಮಾಡಿದೆ.
ಶೇಖ್ ಅಬು ಬಕರ್ ಅಹ್ಮದ್ ಒಬ್ಬ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರಾಗಿದ್ದು, ಷರಿಯಾ ಕಾನೂನಿನ ಬಗ್ಗೆ ಅವರ ಆಳವಾದ ಜ್ಞಾನಕ್ಕಾಗಿ ವ್ಯಾಪಕವಾಗಿ ಗೌರವಿಸಲ್ಪಡುತ್ತಾರೆ. “ಗ್ರಾಂಡ್ ಮುಫ್ತಿ” ಎಂಬ ಬಿರುದು ಭಾರತದಲ್ಲಿ ಅನಧಿಕೃತವಾಗಿದ್ದರೂ, ಅವರನ್ನು ಭಾರತದ ಸುನ್ನಿ ಮುಸ್ಲಿಂ ಸಮುದಾಯದಲ್ಲಿ ಮಹತ್ವದ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಅವರನ್ನು ಭಾರತದ 10ನೇ ಗ್ರ್ಯಾಂಡ್ ಮುಫ್ತಿ ಎಂದು ಕರೆಯಲಾಗುತ್ತದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದರು. ಅವರು ತಮ್ಮ ದೈನಂದಿನ ಕೂಲಿ ಕಾರ್ಮಿಕರಾದ ಪೋಷಕರಿಗೆ ಆರ್ಥಿಕ ಸಹಾಯ ನೀಡಲು ಯೆಮೆನ್‌ಗೆ ತೆರಳಿದ್ದರು. ಯೆಮೆನ್‌ನಲ್ಲಿ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಅವರ ಜೊತೆ ಒಡನಾಟ ಬೆಳೆಸಿಕೊಂಡರು.
ಯೆಮೆನ್ ವ್ಯವಹಾರ ಕಾನೂನಿನ ಪ್ರಕಾರ ಅಲ್ಲಿ ಬ್ಯುಸಿನೆಸ್ ಪ್ರಾರಂಭಿಸಲು ವಿದೇಶಿಯೊಬ್ಬ ಸ್ಥಳೀಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ನಿಮಿಷಾ ತಲಾಲ್ ಜೊತೆ 2015ರಲ್ಲಿ ಸನಾದಲ್ಲಿ ತನ್ನ ಕ್ಲಿನಿಕ್ ಪ್ರಾರಂಭಿಸಿದರು. ಸ್ವಲ್ಪ ದಿನದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ತಲಾಲ್ ನಿಮಿಷಾರ ಪಾಸ್‌ಪೋರ್ಟ್ ಅನ್ನು ಸಹ ತೆಗೆದುಕೊಂಡಿದ್ದ ಎನ್ನಲಾಗಿದೆ. ಆತನಿಂದ ನಿಮಿಷಾ ತನ್ನ ಪಾಸ್‌ಪೋರ್ಟ್ ಮರಳಿ ಪಡೆದು ಭಾರತಕ್ಕೆ ಹಿಂತಿರುಗಲು ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ, ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.
ನಿಮಿಷಾ ಪ್ರಿಯಾಳನ್ನು ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ಆದರೆ, ಆಕೆಯ ಕುಟುಂಬ ಮೃತ ವ್ಯಕ್ತಿಯ ಕುಟುಂಬದ ಜೊತೆ ಬ್ಲಡ್ ಮನಿ ಒಪ್ಪಂದಕ್ಕೆ ಹೆಚ್ಚಿನ ಸಮಯವನ್ನು ಪಡೆಯಲು ಭಾರತವು ಒತ್ತಡ ಹೇರಿದ ನಂತರ ಯೆಮೆನ್ ಅಧಿಕಾರಿಗಳು ಆಕೆಯ ಮರಣದಂಡನೆಯನ್ನು ಮುಂದೂಡಿದರು. ಕೇರಳದ ಧರ್ಮಗುರು ಶೇಖ್ ಅಬು ಬಕರ್ ಅಹ್ಮದ್ ಮಧ್ಯಪ್ರವೇಶಕ್ಕಾಗಿ ಪ್ರಮುಖ ಯೆಮೆನ್ ಧಾರ್ಮಿಕ ಗುರುಗಳನ್ನು ಸಂಪರ್ಕಿಸಿದರು. ಭಾರತದ ಸುಪ್ರೀಂ ಕೋರ್ಟ್ನಲ್ಲಿ ಕೂಡ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆದಿತ್ತು. ಆಗ ಭಾರತ ಸರ್ಕಾರ ತನ್ನ ಕೈಲಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಹೇಳಿತ್ತು.
ಇನ್ನೊಂದೆಡೆ, ಷರಿಯಾ ಕಾನೂನಿನಲ್ಲಿ ಅವಕಾಶವಿರುವಂತೆ ಬ್ಲಡ್ ಮನಿ ಪಡೆದು ಕೇಸ್ ಹಿಂಪಡೆಯಲು ಮೃತ ವ್ಯಕ್ತಿಯ ಕುಟುಂಬಸ್ಥರು ಒಪ್ಪಲಿಲ್ಲ. ಇದು ನಿಮಿಷಾಳ ಕುಟುಂಬಕ್ಕೆ ದೊಡ್ಡ ಹಿನ್ನಡೆಯಾಯಿತು. ನಿಮಿಷಾಳ ಮರಣದಂಡನೆಯನ್ನು ಮುಂದೂಡಿರುವುದನ್ನು ಮೃತ ವ್ಯಕ್ತಿ ತಲಾಲ್ ಮಹ್ದಿ ಅವರ ಸಹೋದರ ಅಬ್ದೆಲ್‌ಫತ್ತಾ ಮಹ್ದಿ ಟೀಕಿಸಿದ್ದಾರೆ. ಮೃತರ ಕುಟುಂಬದಿಂದ ನಿಮಿಷಾಗೆ ಕ್ಷಮೆ ಪಡೆಯುವ ಪ್ರಯತ್ನಗಳನ್ನು ಮತ್ತು ಭಾರತ ಸರ್ಕಾರ ಸೇರಿದಂತೆ ವಿವಿಧ ಪಕ್ಷಗಳಿಂದ ಮಧ್ಯಸ್ಥಿಕೆಯ ಮಾತುಕತೆಗಳನ್ನು ಅವರು ಬಲವಾಗಿ ತಿರಸ್ಕರಿಸಿದ್ದರು. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅಬ್ದುಲ್ ಫತ್ತಾಹ್, ಇಸ್ಲಾಮಿಕ್ ಶರಿಯಾ ಕಾನೂನಿನ ಪ್ರಕಾರ ಕ್ವಿಸಾಸ್ (ಪ್ರತೀಕಾರ)ಗಾಗಿ ನಮ್ಮ ಬೇಡಿಕೆ ದೃಢವಾಗಿದೆ. ಮರಣದಂಡನೆ ಜಾರಿಯಾಗುವವರೆಗೆ ಕಾನೂನು ಕ್ರಮಗಳನ್ನು ಮುಂದುವರಿಸುತ್ತೇವೆ. ಮರಣದಂಡನೆಯನ್ನು ಮುಂದೂಡಿದ ಮಾತ್ರಕ್ಕೆ ಆಕೆ ಗಲ್ಲಿಗೇರುವುದು ತಪ್ಪುವುದಿಲ್ಲ ಎಂದು ಹೇಳಿದ್ದರು. ಆದರೆ, ಕೊನೆಗೂ ನಿಮಿಷಾ ಗಲ್ಲು ಶಿಕ್ಷೆಯಿಂದ ಪಾರಾಗಿ ಸಾವನ್ನು ಗೆದ್ದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post