ಮುಂಬೈ: ಮಂಗಳೂರು ಮೂಲದ ದಿವಿತಾ ರೈ ಪ್ರತಿಷ್ಠಿತ ಲಿವಾ ಮಿಸ್ ದಿವಾ ಯುನಿಸವರ್ಸ್-2022 (LIVA Miss Diva Universe 2022) ಸೌಂದರ್ಯ ಸ್ಪರ್ಧೆ ಗೆದ್ದಿದ್ದಾರೆ. 23 ವರ್ಷ ವಯಸ್ಸಿನ ಇವರು ಮಿಸ್ ಯುನಿವರ್ಸ್ 2022 ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮುಂಬೈನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2021ರ ಮಿಸ್ ಯುನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022 ಪ್ರಶಸ್ತಿ ಕಿರೀಟ ತೊಡಿಸಿದರು. ತೆಲಂಗಾಣದ ಪ್ರಜ್ಞಾ ಅಯ್ಯಂಗಾರಿಯವರು ಲಿವಾ ಮಿಸ್ ದಿವಾ ಸುಪ್ರಾನ್ಯಾಷನಲ್-2022 ಗೌರವಕ್ಕೆ ಪಾತ್ರರಾದರು. ಮಿಸ್ ಸುಪ್ರಾನ್ಯಾಷನಲ್ ಏಷ್ಯಾ 2022 ರಿತಿಕಾ ಖತ್ನಾನಿಯವರು ಪ್ರಜ್ಞಾ ಅವರಿಗೆ ಕಿರೀಟ ತೊಡಿಸಿದರು. ಅಪಾರ ಅಭಿಮಾನಿಗಳು ಮತ್ತು ತಾರಾಬಳಗ ಪಾಲ್ಗೊಂಡಿದ್ದ ಈ ಕಾರ್ಯಕ್ರಮ ಮುಂಬೈನ ಮಹಾಲಕ್ಷ್ಮಿಯಲ್ಲಿರುವ ಫೇಮಸ್ ಸ್ಟುಡಿಯೊದಲ್ಲಿ ನಡೆಯಿತು. ಮಿಸ್ ಯುನಿವರ್ಸ್ 2022 ಹರ್ನಾಝ್ ಕೌರ್ ಸಂಧು ಮತ್ತು ಮಾಜಿ ಮಿಸ್ ಯುನಿವರ್ಸ್ ಲಾರಾದತ್ತಾ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಹರ್ನಾಝ್ ಅವರಿಗೆ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರಿನಲ್ಲಿ ಜನಿಸಿದ ದಿವಿತಾ ರೈ ಅವರ ತಂದೆ ದಿಲೀಪ್ ರೈ ಹಾಗೂ ತಾಯಿ ಪವಿತ್ರಾ ರೈ. ತಂದೆಯ ಉದ್ಯೋಗದ ಕಾರಣದಿಂದಾಗಿ ದಿವಿತಾ ಬೇರೆ ಬೇರೆ ಸ್ಥಳಗಳಲ್ಲಿ ಬೆಳೆದಿದ್ದರು. ಮುಂಬೈನಲ್ಲಿ ನೆಲೆಸಿರುವ ಅವರು ಜೆ.ಜೆ.ಕಾಲೇಜ್ ಆಫ್ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದಿದ್ದಾರೆ. ಇವರ ಅಣ್ಣ ದೈವಿಕ್ ರೈ ಕ್ರಿಕೆಟಿಗ. ಭಾರತದ ಒಳಾಂಗಣ ಕ್ರಿಕೆಟ್ ತಂಡದ ಸದಸ್ಯರಾಗಿರುವ ಇವರು 2017ರ ಒಳಾಂಗಣ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿದ್ದರು. ಲೀವಾ ಮಿಸ್ ದೀವಾ ಯೂನಿವರ್ಸ್-2020ರ ಪ್ರಶಸ್ತಿಯನ್ನು ಉಡುಪಿಯ ಉದ್ಯಾವರ ಕೊರಂಗ್ರಪಾಡಿ ನಿವಾಸಿ ಅಡ್ಲಿನ್ ಕ್ಯಾಸ್ಟಲಿನೊ ಪಡೆದುಕೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post