ಬೆಳ್ತಂಗಡಿ, ಆ.28 : ಧರ್ಮಸ್ಥಳ ಹೆಣ ಹೂತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಚಿನ್ನಯ್ಯನನ್ನು ಸಾಕ್ಷಿಯಾಗಿಸಿ ತನಿಖೆ ನಡೆಸಬೇಕೆಂದು ಆಕೆಯ ತಾಯಿ ಕುಸುಮಾವತಿ ಅವರು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ಮಗಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನೂ ತನಿಖೆ ನಡೆಸುವಂತೆ ಎಸ್‌ಐಟಿಗೆ ಮನವಿ ಮಾಡಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಎಸ್‌ಐಟಿ, ದೂರು ಮತ್ತು ಮನವಿಯನ್ನು ಪರಿಗಣಿಸುವುದಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.
ಸದ್ಯ ಎಸ್ಐಟಿ ವಶದಲ್ಲಿರುವ ಚಿನ್ನಯ್ಯ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸೌಜನ್ಯಾ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾನೆ. ಈತನ ಹೇಳಿಕೆ ವೈರಲ್ ಆಗಿದ್ದು ಈ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸಿ ಮರು ತನಿಖೆ ಮಾಡಬೇಕೆಂದು ಕುಸುಮಾವತಿ ಕೇಳಿಕೊಂಡಿದ್ದಾರೆ.
ಕುಸುಮಾವತಿ ಅವರು ಎಸ್‌ಐಟಿಗೆ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾದ ದೂರಿನ ಪ್ರತಿ ಈದಿನ.ಕಾಮ್‌ಗೆ ದೊರೆತಿದೆ. ದೂರಿನಲ್ಲಿ; “2012 ಅಕ್ಟೋಬರ್ 9 ರಂದು ಧರ್ಮಸ್ಥಳದಲ್ಲಿ ನನ್ನ ಮಗಳು ಸೌಜನ್ಯ ಭೀಕರ ಹಿಂಸೆ ಮತ್ತು ಬರ್ಬರ ಅತ್ಯಾಚಾರಕ್ಕೊಳಗಾಗಿ ಕೊಲೆಯಾದಳು. ಕೃತ್ಯ ನಡೆದ 13 ವರ್ಷಗಳು ಕಳೆದರೂ, 2025ರಲ್ಲೂ ಪೊಲೀಸರು ನಿಜವಾದ ಅಪರಾಧಿಯನ್ನು ಗುರುತಿಸಿಲ್ಲ. ಈಗ ಎಸ್‌ಐಟಿ ತನಿಖೆಗೊಳಪಡಿಸಿರುವ ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಸೌಜನ್ಯಳ ಮೇಲೆ ನಡೆದ ಅಪರಾಧಗಳ ಬಗ್ಗೆ ತಿಳಿದಿದೆ. ಹೀಗಾಗಿ, ಧರ್ಮಸ್ಥಳದ ಸಮಗ್ರ ಪ್ರಕರಣಗಳೊಂದಿಗೆ ಸೌಜನ್ಯ ಪ್ರಕರಣವನ್ನು ಒಳಗೊಂಡು ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
“ಚಿನ್ನಯ್ಯ ಅವರು ಮೃತ ದೇಹಗಳನ್ನು ವಿಲೇವಾರಿ ಮಾಡುತ್ತಿದ್ದ ವಿಷಯವು ಧರ್ಮಸ್ಥಳದ ಹಲವಾರು ಜನರಿಗೆ ತಿಳಿದಿದ್ದು, ನನ್ನ ತಂದೆ ಮತ್ತು ಸಹೋದರನಿಗೂ ಈತನ ಕಸುಬಿನ ಬಗ್ಗೆ ಅರಿವಿತ್ತು. ನೀವು ಇತ್ತೀಚೆಗೆ ಪಡೆದುಕೊಂಡ ಮಾಹಿತಿಯಂತೆ ಈ ಚಿನ್ನಯ್ಯನಿಗೆ ಸೌಜನ್ಯಳ ಮೇಲೆ ನಡೆದ ಅಪರಾಧಗಳ ಬಗ್ಗೆ ಜ್ಞಾನವಿದ್ದರೂ, ಆ ವಿಷಯವನ್ನು ತನ್ನ ಲಿಖಿತ ದೂರಿನಲ್ಲಿ ಆತ ಎಲ್ಲಿಯೂ ಹೇಳಿರುವುದಿಲ್ಲ. ಈತ 2014ರಲ್ಲಿ ಧರ್ಮಸ್ಥಳವನ್ನು ತೊರೆಯಲು ಸೌಜನ್ಯಳ ಸಾವಿನ ನಂತರದ ಘಟನೆಗಳೇ ಕಾರಣವೆಂದು ತಿಳಿದು ಬಂದಿದೆ” ಎಂದು ಹೇಳಿದ್ದಾರೆ.
“ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯಗಳ ತನಿಖೆಗಾಗಿ ಇತ್ತೀಚಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಭೇಟಿ ನೀಡಿತ್ತು. ಆಗ, ಚಿನ್ನಯ್ಯನ ಅಕ್ಕ ರತ್ನ ಅವರು, ‘ಧರ್ಮಸ್ಥಳ ದೇವಸ್ಥಾನದ ಪ್ರಮುಖರೊಬ್ಬರು ಚಿನ್ನಯ್ಯನಿಗೆ 2014ರಲ್ಲಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯ ವಿಚಾರವಾಗಿ ಜೀವ-ಭಯವಿಟ್ಟಿದ್ದರು. ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಗೆ ಕಾರಣರಾದವರ ಬಗ್ಗೆ ಚಿನ್ನಯ್ಯ ಎಲ್ಲಿಯಾದರೂ ಬಾಯಿಬಿಟ್ಟರೆ, ಆತ ಯಾವುದೇ ದೇಶಕ್ಕೆ ಹೋಗಿ ಅಡಗಿಕೊಂಡರೂ, ಆತನನ್ನು ಹುಡುಕಿ ಮುಗಿಸುವುದಾಗಿ ಬೆದರಿಕೆ ಹಾಕಿದ್ದರು. ಆ ಜೀವಭಯದಿಂದಲೇ, ಚಿನ್ನಯ್ಯ ಧರ್ಮಸ್ಥಳ ಬಿಟ್ಟು ಓಡಿ ಹೋಗಬೇಕಾಯಿತು’ ಎಂಬುದಾಗಿ ಹೇಳಿದ್ದಾರೆ ಎಂಬ ವಿಚಾರ ಗೊತ್ತಾಯಿತು” ಎಂದು ಕುಸುಮಾವತಿ ತಿಳಿಸಿದ್ದಾರೆ.
“ಚಿನ್ನಯ್ಯನ ಅಕ್ಕ ರತ್ನ ಮಾನವ ಹಕ್ಕು ಆಯೋಗಕ್ಕೆ ಮೇಲಿನಂತೆ ನೀಡಿದ ಹೇಳಿಕೆಯನ್ನು ನಾನು ಕೇಳಿಸಿಕೊಂಡೆ. ಮುಂದುವರೆದು, ಆಗಸ್ಟ್ 24ರ ಭಾನುವಾರ, ‘ಡಿ ಟಾಕ್ಸ್’ ಎಂಬ ಮಾಧ್ಯಮವು ಚಿನ್ನಯ್ಯನೊಂದಿಗೆ ಇತ್ತೀಚೆಗೆ ನಡೆಸಿದ ಸಂದರ್ಶನವನ್ನು ಪ್ರಸಾರ ಮಾಡಿದೆ. ಅದರಲ್ಲಿ, ಚಿನ್ನಯ್ಯ ಹೇಳಿರುವಂತೆ; ‘ಧರ್ಮಸ್ಥಳದ ಸ್ನಾನಘಟ್ಟದ ಬಳಿ ಕೆಲಸಗಾರನಾಗಿದ್ದ ರವಿ ಪೂಜಾರಿ ಎನ್ನುವ ವ್ಯಕ್ತಿಯು ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಗೆ ಕಾರಣರಾದವರ ಹೆಸರುಗಳನ್ನು ಚಿನ್ನಯ್ಯನಿಗೆ ಹೇಳಿದ್ದನು. ಸೌಜನ್ಯ ಪ್ರಕರಣದ ಬಗ್ಗೆ ಎಲ್ಲಿಯೂ ಬಾಯಿಬಿಡದಂತೆ ರವಿ ಪೂಜಾರಿಗೆ ಅಪರಾಧಿಗಳು ಹಣವನ್ನು ಕೊಟ್ಟಿದ್ದರು. ನಂತರ, ಆತನನ್ನು ಕಚೇರಿಯಲ್ಲಿಯೇ ಕೊಂದರು. ಸೌಜನ್ಯಳ ಮೇಲೆ ನಡೆದ ದುಷ್ಕೃತ್ಯಕ್ಕೆ ಕಾರಣರಾದವರ ಬಗ್ಗೆ ಯಾರಿಗಾದರೂ ಹೇಳಿಬಿಡುವನೆಂದೇ ಪ್ರಕರಣದ ಸಾಕ್ಷಿ ರವಿ ಪೂಜಾರಿಯನ್ನು ಕೊಲೆ ಮಾಡಲಾಗಿದೆ’ ಎಂಬುದಾಗಿ ಸಂದರ್ಶನದಲ್ಲಿ ಚಿನ್ನಯ್ಯ ವಿವರಿಸಿದ್ದಾರೆ” ಎಂಬುದನ್ನು ಕುಸುಮಾವತಿ ಎಸ್‌ಐಟಿ ಗಮನಕ್ಕೆ ತಂದಿದ್ದಾರೆ. ಚಿನ್ನಯ್ಯನನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಿ, ಆತ ಸಂದರ್ಶನದಲ್ಲಿ ಹೇಳಿಕೊಂಡಿರುವ ಎಲ್ಲ ವಿಚಾರಗಳನ್ನು ದೃಢಪಡಿಸಬೇಕು. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post