ಮಂಗಳೂರು: ನಗರದಲ್ಲಿ ನಡೆದ ಚಿನ್ನದ ಗಟ್ಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳನ್ನು ಕೆ.ಸಿ.ರೋಡ್ ಕೋಟೆಕಾರು ನಿವಾಸಿ ಫಾರಿಶ್(18), ಮುಕ್ಕಚೇರಿ ನಿವಾಸಿ ಸಫ್ವಾನ್ (23), ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಅರಾಫತ್ ಆಲಿ(18), ಉಳ್ಳಾಲ ದರ್ಗಾ ಬಳಿಯ ಫರಾಝ್, (19) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೂ ಅರೆಸ್ಟ್ ಆಗಿದ್ದಾನೆ.
ಸೆ.26 ರಂದು ಹಂಪನಕಟ್ಟೆಯ ಚಾಯ್ಸ್ ಗೋಲ್ಡ್ ಹೆಸರಿನ ಚಿನ್ನಾಭರಣದ ಅಂಗಡಿಯ ಕೆಲಸಗಾರ ಮುಸ್ತಾಫ ಎಂಬವರು ಸ್ಕೂಟರ್ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 8-45 ವೇಳೆಗೆ ದರೋಡೆ ನಡೆದಿತ್ತು. ಮಂಗಳೂರು ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಸ್ಕೂಟರಿನಲ್ಲಿ ಬಂದು ತಡೆದು ನಿಲ್ಲಿಸಿ, ಇನ್ನಿಬ್ಬರು ಕಾರಿನಲ್ಲಿ ಬಂದು ಮುಸ್ತಾಫ ರವರನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿ ಎಕ್ಕೂರು ಎಂಬಲ್ಲಿ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 111/2025 ಕಲಂ 137(2), 310(2) BNS -2023 ರಂತೆ ಪ್ರಕರಣ ದಾಖಲಾಗಿತ್ತು. ಒಂದೂವರೆ ಕೋಟಿ ಮೌಲ್ಯದ 1650 ಗ್ರಾಮ್ ಚಿನ್ನದ ಗಟ್ಟಿಯನ್ನು ದರೋಡೆ ಮಾಡಲಾಗಿತ್ತು.
ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಹಂಪನಕಟ್ಟೆಯ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ಚಿನ್ನದ ಗಟ್ಟಿಯನ್ನು ಕೊಂಡುಹೋಗುವ ಮಾಹಿತಿಯನ್ನು ಆರೋಪಿಗಳಿಗೆ ನೀಡಿದ್ದರು. ಮುಸ್ತಫಾ ಚಿನ್ನದ ಗಟ್ಟಿಯೊಂದಿಗೆ ತೆರಳುವ ಚಲನವಲನದ ಮಾಹಿತಿಯನ್ನು ಆರೋಪಿ ಫಾರಿಶ್ ನಿಗೆ ನೀಡಿದ್ದು ಅದರಂತೆ ಆರೋಪಿಗಳು ಪೂರ್ವಯೋಜಿತ ಸಂಚು ರೂಪಿಸಿದ್ದರು., ಆರೋಪಿ ಸಫ್ವಾನ್ ಕಾರನ್ನು ಒದಗಿಸಿದ್ದು, ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ಸುಜುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿ, ಇದೇ ಸಮಯ ಉಳಿದ ಆರೋಪಿಗಳು ಸಫ್ವಾನ್ ಒದಗಿಸಿದ ಬಿಳಿ ಬಣ್ಣದ ಕಾರಿನಲ್ಲಿ ಬಂದು ಮುಸ್ತಾಫರವರನ್ನು ಬಲತ್ಕಾರವಾಗಿ ಕಾರಿನಲ್ಲಿ ಹಾಕಿ ಅಪಹರಿಸಿಕೊಂಡು ಹೋಗಿದ್ದರು.
ಈ ಪ್ರಕರಣದಲ್ಲಿ ಕೃತ್ಯಕ್ಕೆ ಉಪಯೋಗಿಸಿದ KA-19HT-8545 ನೋಂದಣಿಯ ಸುಜುಕಿ ಆಕ್ಸೆಸ್ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಕಾರು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲು ಬಾಕಿ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮಂಗಳೂರು ನಗರ ಮತ್ತು ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ, ಸಹಾಯಕ ಪೊಲೀಸ್ ಆಯುಕ್ತರು, ಸಿಸಿಬಿ ಘಟಕ ಮಂಗಳೂರು ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿ ಹಾಗೂ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿ ಭಾಗಿಯಾಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post