ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್. ಅವರು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಅ. 28ರಂದು ತೀರ್ಪು ನೀಡಿದ್ದಾರೆ. ಬಂಟ್ವಾಳ ಬಿ. ಕಸಬಾ ಗ್ರಾಮ ನೆಹರೂ ನಗರದ ಅಬುತಾಹಿರ್ ಆಲಿಯಾಸ್ ಶಾಝಿಲ್(20) ಶಿಕ್ಷೆಗೊಳಗಾದ ಆರೋಪಿ.
ಪ್ರಕರಣದ ವಿವರ : ಆರೋಪಿ ಅಬುತಾಹಿರ್ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿಯ ಪರಿಚಯವಾಗಿ ಫೋನ್ ಮೂಲಕ ಸಂರ್ಪಕದಲ್ಲಿದ್ದ. 2023ರ ಜೂ. 22ರಂದು ಮಡಂತ್ಯಾರಿನಲ್ಲಿ ಭೇಟಿಯಾಗೋಣ ಎಂದು ಹೇಳಿದ್ದು, ಆ ದಿನ ಶಾಲೆಗೆಂದು ಮನೆಯಿಂದ ಹೊರಟು ಬಂದ ಬಾಲಕಿಯನ್ನು ಆರೋಪಿ ಮಡಂತ್ಯಾರಿನಲ್ಲಿ ಭೇಟಿಯಾಗಿದ್ದ. ಒತ್ತಾಯಪಡಿಸಿ ಮಂಗಳೂರಿಗೆ ಕರೆದುಕೊಂಡು ಬಂದು ಅಲ್ಲಿಂದ ಗೋವಾಕ್ಕೆ ಹೋಗಲು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ರಾತ್ರಿ ಸುಮಾರು 11ರಿಂದ 12 ಗಂಟೆಯ ಮಧ್ಯದ ಅವಧಿಯಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 3ರಲ್ಲಿ ತಂಗಿದ್ದ ಮಂಗಳೂರು ಮಡಗಾಂವ್ ರೈಲಿನ ಯಾರೂ ಇಲ್ಲದ ಬೋಗಿಯ ಒಳಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದ.
ಬಾಲಕಿ ಕಾಣೆಯಾದ ಬಗ್ಗೆ ಆಕೆಯ ತಾಯಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಾತ್ರಿ 12ಕ್ಕೆ ಬಾಲಕಿ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ತನ್ನ ತಾಯಿಗೆ ಕರೆ ಮಾಡಿದ್ದಳು. ಈ ವಿಷಯವನ್ನು ತಾಯಿ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಬಂದು ನೊಂದ ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ಬಾಲಕಿಗೆ ಪರಿಹಾರಕ್ಕೆ ಸೂಚನೆ : 20 ವರ್ಷ ಜೈಲು ಮತ್ತು ಒಟ್ಟು 60,000 ರೂ. ದಂಡ ವಿಧಿಸಿದ್ದಾರೆ. ದಂಡದ ಹಣವಾದ 50,000 ರೂ.ಗಳನ್ನು ನೊಂದ ಬಾಲಕಿಗೆ ಪಾವತಿಸುವಂತೆ ಆದೇಶಿಸಿದ್ದಾರೆ. ಸಂತ್ರಸ್ತರ ಪರಿಹಾರ ಯೋಜನೆಯಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 1.50 ಲ.ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಕೆ. ಬದರಿನಾಥ ನಾಯರಿ ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post