ಮಂಗಳೂರು: ವಿಧಾನಸಭಾ ಅಧ್ಯಕ್ಷರ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆ ಹೆಸರಲ್ಲಿ ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ಮತ್ತು ದುಂದುವೆಚ್ಚವಾಗಿದ್ದು, ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಶಾಸಕರ ಭವನದಲ್ಲಿ ಪ್ರತಿ ಕೊಠಡಿಗೂ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸೊಲ್ಯುಶನ್ಸ್, ಸ್ಟೈನ್ ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ ಗಳನ್ನು ಜೋಡಿಸಲಾಗಿದೆ. ಆದರೆ ಇದರ ಮಾರುಕಟ್ಟೆ ದರಕ್ಕೂ, ಅಲ್ಲಿ ತೋರಿಸಿರುವ ದರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಸ್ಮಾರ್ಟ್ ಡೋರ್ ಲಾಕ್ ಗೆ ಮಾರುಕಟ್ಟೆ ದರ 16 ಸಾವಿರ ಇದ್ದರೆ, ಅದನ್ನು ಶಾಸಕರ ಭವನದ ಲೆಕ್ಕದಲ್ಲಿ 49 ಸಾವಿರ ತೋರಿಸಲಾಗಿದೆ. ಸೇಫ್ ಲಾಕರನ್ನು 35 ಸಾವಿರ ತೋರಿಸಲಾಗಿದ್ದು ಅದಕ್ಕೆ ಮಾರುಕಟ್ಟೆಯಲ್ಲಿ 8100 ರೂ. ಇದೆ. ಮಾರುಕಟ್ಟೆಯಲ್ಲಿ 30 ಸಾವಿರ ಇರುವ ಸ್ಮಾರ್ಟ್ ಎನರ್ಜಿ ಸೊಲ್ಯುಶನ್ಸ್ ಅನ್ನು 90,500 ರೂ. ಎಂದು ಲೆಕ್ಕ ತೋರಿಸಲಾಗಿದೆ. ವಾಟರ್ ಪ್ಯೂರಿಫೈಯರಿಗೆ 65 ಸಾವಿರ ದರ ಹಾಕಲಾಗಿದ್ದು ಅದಕ್ಕೆ ಮಾರುಕಟ್ಟೆಯಲ್ಲಿ 16 ಸಾವಿರದಿಂದ 50 ಸಾವಿರದ ವರೆಗೆ ಬೆಲೆ ತೋರಿಸುತ್ತದೆ.
ಮಂಗಳೂರಿನ ವ್ಯಕ್ತಿಯ ಮೂಲಕ ಇದನ್ನು ಮಾಡಿಸಲಾಗಿದ್ದು, ಅಗತ್ಯ ಇಲ್ಲದಿದ್ದರೂ ಶಾಸಕರ ಭವನದ ನವೀಕರಣ ಹೆಸರಲ್ಲಿ 2ರಿಂದ 3 ಪಟ್ಟು ಬಿಲ್ ತೋರಿಸಲಾಗಿದೆ. ಹಣಕಾಸು ಇಲಾಖೆ ಅನುಮತಿ ನೀಡದಿದ್ದರೂ ಮುಖ್ಯಮಂತ್ರಿಯವರ ಮೌಖಿಕ ಅನುಮತಿಯೊಂದಿಗೆ ತುರ್ತಾಗಿ ಮಾಡಬೇಕಾದ ಕೆಲಸವೆಂದು ತೋರಿಸಿ 4ಜಿ ವಿನಾಯಿತಿಯನ್ನೂ ಪಡೆಯಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಅಭಿವೃದ್ಧಿ ಕಾರ್ಯಕ್ಕೆ, ರಸ್ತೆ ಗುಂಡಿ ಮುಚ್ಚುವುದಕ್ಕೂ ಹಣ ಇಲ್ಲದ ಸ್ಥಿತಿ ಇರುವಾಗ ಸ್ಪೀಕರ್ ಖಾದರ್ ಈ ರೀತಿ ದುಂದುವೆಚ್ಚ ಯಾಕೆ ಮಾಡಿದ್ದಾರೆ.
ಯಾವುದೇ ವಸ್ತು ಖರೀದಿಸಲು ಹಣಕಾಸು ಇಲಾಖೆಯ ಅನುಮತಿ ಮತ್ತು ಟೆಂಡರ್ ಸೇರಿದಂತೆ ಹಲವು ನಿಯಮ ಗಳ ಪಾಲನೆಯಾಗಬೇಕು. ಆದರೆ ಇಲ್ಲಿ ಅಂತಹ ನಿಯಮಗಳ ಪಾಲನೆಯಾಗಿಲ್ಲ. ಹಣಕಾಸು ಇಲಾಖೆಯ ಅನುಮತಿ ಇಲ್ಲದೆಯೇ ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ. ಇದಲ್ಲದೆ, 5 ದಿನದ ಪುಸ್ತಕ ಮೇಳ ಹೆಸರಲ್ಲಿ ನಾಲ್ಕೂವರೆ ಕೋಟಿ ಬಿಲ್ ಮಾಡಿದ್ದಾರೆ. ಪುಸ್ತಕ ಖರೀದಿ ಅಲ್ಲ, ಕೇವಲ ಮೇಳದ ವೆಚ್ಚವೆಂದು 4.5 ಕೋಟಿ ತೋರಿಸಿದ್ದಾರೆ. ಇದನ್ನು ಮಾಹಿತಿ ಹಕ್ಕಿನಿಂದ ಪಡೆದು ಪತ್ರಿಕೆಯವರೇ ಸುದ್ದಿ ಮಾಡಿದ್ದಾರೆ. ಸಭಾಧ್ಯಕ್ಷ ಪೀಠವನ್ನು ರೋಸ್ ವುಡ್, ಟೀಕ್ ವುಡ್ ನಲ್ಲಿ ಅಲಂಕರಿಸಿ ದುಬಾರಿ ವೆಚ್ಚ ಮಾಡಿದ್ದಾರೆ. ಎಲ್ಲ ಶಾಸಕರಿಗೆ ಗಂಡ ಭೇರುಂಡ ಲಾಂಛನದ ಗೋಡೆ ಗಡಿಯಾರ, ವಿಧಾನಸಭೆಯ ಒಳಗಡೆ 45 ಲಕ್ಷ ವೆಚ್ಚದಲ್ಲಿ ಎಐ ಕ್ಯಾಮರಾ, ಅದರ ಉನ್ನತೀಕರಣಕ್ಕೆ 35 ಲಕ್ಷ, ಶಾಸಕರ ಭವನದ ಎಲ್ಲಾ ಕೊಠಡಿಗಳಿಗೆ ಹೊಸತಾಗಿ ಮಂಚ, ಟೇಬಲ್, ಕುರ್ಚಿಗಳನ್ನು ಹಾಕಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜಗೋಪಾಲ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂರ್ಣಿಮಾ, ರಮೇಶ್ ಕಂಡೆಟ್ಟು, ವಸಂತ ಪೂಜಾರಿ, ಅರುಣ್ ಶೇಟ್ ಮತ್ತಿತರರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post