ತಿರುವನಂತಪುರಂ, ಜ 30: ಎರಡು ವರ್ಷಗಳ ಹಿಂದೆ ಅಂದರೆ, 2021 ರ ಡಿಸೆಂಬರ್‌ನಲ್ಲಿ ಅಲಪ್ಪುಳ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಒಬಿಸಿ ವಿಭಾಗದ ಮುಖಂಡ ರಂಜಿತ್ ಶ್ರೀನಿವಾಸನ್ ಅವರ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿಷೇಧಿತ ಇಸ್ಲಾಮಿಸ್ಟ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಬಂಧ ಹೊಂದಿದ್ದ 15 ವ್ಯಕ್ತಿಗಳಿಗೆ ಕೇರಳ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ.
ಮಾವೇಲಿಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ-1 ಜನವರಿ 30 (ಮಂಗಳವಾರ) ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಿದ 15 ಜನರಿಗೆ ಮರಣದಂಡನೆ ವಿಧಿಸಿದೆ. ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮತ್ತು ವಕೀಲರಾಗಿದ್ದ ರಂಜಿತ್ ಅವರನ್ನು ಡಿಸೆಂಬರ್ 19, 2021 ರಂದು ಬೆಳಗ್ಗೆ ಅಲಪ್ಪುಳ ಪುರಸಭೆಯ ವೆಲ್ಲಕಿನಾರ್‌ನಲ್ಲಿರುವ ಅವರ ಮನೆಯಲ್ಲಿಯೇ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಯಿತು. ನೈಝಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಮ್, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಸಫರುದ್ದೀನ್, ಮಾನ್ಶಾದ್, ಜಸೀಬ್ ರಾಜಾ, ನವಾಸ್, ಸಮೀರ್, ನಾಝೀರ್, ಅಬ್ದುಲ್ ಕಲಾಂ, ಝಾಕೀರ್ ಹುಸೇನ್, ಶಾಜಿ ಮತ್ತು ಶೆರ್ನಾಸ್ ಅಶ್ರಫ್ ಶಿಕ್ಷೆಗೊಳಗಾದ ಆರೋಪಿಗಳು.
ಕುಟುಂಬದವರ ಎದುರೇ ಬರ್ಬರ ಹತ್ಯೆ : ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಶ್ರೀನಿವಾಸನ್ ಅವರನ್ನು ಡಿಸೆಂಬರ್ 19, 2021 ರಂದು ಅವರ ಮನೆಯಲ್ಲೇ ಅವರ ಕುಟುಂಬದವರ ಎದುರೇ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ರಂಜಿತ್ ಅವರ ತಾಯಿ, ಹೆಂಡತಿ ಮತ್ತು ಮಗಳ ಈ ಘೋರ ಘಟನೆಗೆ ಸಾಕ್ಷಿಯಾಗಿದ್ದರು.
ಪಿಎಫ್‌ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಗೆ ಸಂಬಂಧಿಸಿದ ಕಾರ್ಯಕರ್ತರು ಪ್ರಕರಣ ಮಾಡಿದ್ದಾರೆ ಎಂದು ಅರೋಪ ಕೇಳಿ ಬಂದಿತ್ತು. ಈಗ ಹತ್ಯೆ ಪ್ರಕರಣದಲ್ಲಿ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಿ ಶ್ರೀದೇವಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣ : ಪ್ರಕರಣದ ಆರೋಪಿಗಳಾಗಿರುವ 15 ಜನರಲ್ಲಿ ಒಬ್ಬರಿಂದ ಎಂಟು ಮಂದಿ ನೇರವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜನವರಿ 20 ರಂದು ನ್ಯಾಯಾಲಯಕ್ಕೆ ತಿಳಿದು ಬಂದಿತ್ತು. ನಾಲ್ವರು (ಆರೋಪಿ ಸಂಖ್ಯೆ ಒಂಬತ್ತರಿಂದ 12) ಕೊಲೆಯ ತಪ್ಪಿತಸ್ಥರೆಂದು ತಿಳಿದು ಬಂದಿತ್ತು. ಇವರು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿರುವವರೊಂದಿಗೆ ಮಾರಕ ಆಯುಧಗಳೊಂದಿಗೆ ಶಸ್ತ್ರಸಜ್ಜಿತವಾದ ಸ್ಥಳಕ್ಕೆ ಬಂದಿದ್ದವರು. ರಂಜಿತ್ ಶ್ರೀನಿವಾಸನ್ ಪರಾರಿಯಾಗುವುದನ್ನು ತಡೆಯುವುದು ಮತ್ತು ಅವರ ಕಿರುಚಾಟವನ್ನು ಕೇಳಿದ ನಂತರ ಯಾರಾದರೂ ಮನೆಗೆ ಬಂದರೆ ಅವರನ್ನು ತಡೆಯುವುದು ಈ ನಾಲ್ವರ ಉದ್ದೇಶವಾಗಿತ್ತು. ಐಪಿಸಿ ಸೆಕ್ಷನ್ 149 ಅಡಿಯಲ್ಲಿ ಕೊಲೆಯ ಸಾಮಾನ್ಯ ಅಪರಾಧಕ್ಕೆ ಅವರು ಹೊಣೆಗಾರರಾಗಿದ್ದಾರೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ಶ್ರೀನಿವಾಸನ್ ಹತ್ಯೆಗೆ ಸಂಚು ರೂಪಿಸಿದ್ದ ಇತರ ಮೂವರನ್ನು (ಆರೋಪಿ ಸಂಖ್ಯೆ 13 ರಿಂದ 15) ಕೊಲೆ ಮಾಡಿದ ಆರೋಪದಲ್ಲಿ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. 2021 ರ ಡಿಸೆಂಬರ್ 18 ರ ರಾತ್ರಿ ಎಸ್‌ಡಿಪಿಐ ಮುಖಂಡ ಕೆಎಸ್ ಶಾನ್ ಅವರು ಅಲಪ್ಪುಳದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಗ್ಯಾಂಗ್‌ನಿಂದ ಹತ್ಯೆಯಾದ ಕೆಲವೇ ಗಂಟೆಗಳ ನಂತರ ಬಿಜೆಪಿ ನಾಯಕನ ಹತ್ಯೆ ಸಂಭವಿಸಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post