ಮಂಗಳೂರು : ಜಯಕರ್ನಾಟಕ ಜನಪರ ವೇದಿಕೆಯ ಮುಖಂಡ, ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ತನ್ನ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣ ಸಂಬಂಧ ಇಂದು ಮಂಗಳೂರು ಪೊಲೀಸ್ ಕಮಿಷನರ್ ಮುಂದೆ ತನಿಖೆಗೆ ಹಾಜರಾಗಿದ್ದಾರೆ. ಕೆಲ ದಿನಗಳ ಹಿಂದೆ ಗುಣರಂಜನ್ ಶೆಟ್ಟಿ ಅವರು ತನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಗೃಹ ಇಲಾಖೆಗೆ ದೂರು ನೀಡಿದ್ದರು. ಕೊಲೆಗೆ ಸಂಚು ರೂಪಿಸಿರುವ ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸರಿಗೆ ಗೃಹ ಇಲಾಖೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಗುಣರಂಜನ್ ಶೆಟ್ಟಿ ಮಂಗಳೂರು ಕಮಿಷನರ್ ಕಚೇರಿಯಲ್ಲಿ ತನಿಖೆಗೆ ಹಾಜರಾದರು.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗುಣರಂಜನ್ ಶೆಟ್ಟಿ, ನಮಗೆ ಸಿಕ್ಕ ಮಾಹಿತಿ ಪ್ರಕಾರ ನನ್ನ ಕೊಲೆಗೆ ಸ್ಕೆಚ್ ಹಾಕಿರುವ ಬಗ್ಗೆ ಗೃಹ ಇಲಾಖೆಗೆ ಮನವಿಯನ್ನು ಕೊಟ್ಟಿದ್ದೆ. ನನಗೆ ಹಲವು ಜನರ ಜೊತೆ ವ್ಯವಹಾರ ಇದೆ. ನಮ್ಮನ್ನು ಕಂಡರೆ ಆಗದವರೂ ಇದ್ದಾರೆ. ಹಾಗಾಗಿ ಪ್ರಕರಣ ಸಂಬಂಧ ಮಂಗಳೂರು ಕಮಿಷನರ್ ಕಚೇರಿಯಿಂದ ತನಿಖೆಗೆ ಕರೆದಿದ್ದರು. ನನಗೆ ಗೊತ್ತಿರುವ ಮಾಹಿತಿಗಳನ್ನು ಕೊಟ್ಟಿದ್ದೇನೆ .ಇದರ ಹಿಂದೆ ಇಂಥ ವ್ಯಕ್ತಿ ಇದ್ದಾರೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಪೊಲೀಸರ ಭದ್ರತೆ ಬಗ್ಗೆ ನಾನು ಕೇಳಿಲ್ಲ ಈ ಬಗ್ಗೆ ಪೊಲೀಸರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಕರ್ನಾಟಕ ಪೊಲೀಸರ ಬಗ್ಗೆ ನಂಬಿಕೆ ಇದೆ. ಯಾರು ಶಾಮೀಲಾಗಿದ್ದಾರೋ ಪೊಲೀಸರು ಅವರ ತನಿಖೆ ನಡೆಸುತ್ತಾರೆ. ಪ್ರಕರಣದ ಬಗ್ಗೆ ಮನ್ವಿತ್ ರೈ ಯಾಕಾಗಿ ಹೊರಗಡೆ ಹೇಳಿದ್ದಾರೋ ಗೊತ್ತಿಲ್ಲ .ಮನ್ವಿತ್ ರೈ ಜೊತೆಗೆ ನಾನು ಯಾವುದೇ ವೈಮನಸ್ಸು ಹೊಂದಿಲ್ಲ. ಅವರು ಯಾಕೆ ಆ ರೀತಿ ಹೇಳಿದ್ದಾರೆ ಎಂದು ಅವರೇ ಹೇಳಬೇಕು. ಈ ಪ್ರಕರಣದಲ್ಲಿ ಅವರ ಹೆಸರು ಥಳಕು ಹಾಕಿಕೊಂಡಿದ್ದು ನನಗೆ ಗೊತ್ತಾಗಿದ್ದು, ಮಾಧ್ಯಮದ ಮೂಲಕ. ಈ ಬಗ್ಗೆ ಮನ್ವಿತ್ ರೈ ಖುದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಅವರು ಏಕೆ ಕೊಟ್ಟರೋ ಗೊತ್ತಿಲ್ಲ. ಅದಕ್ಕೆ ಅವರೇ ಉತ್ತರ ಕೊಡಬೇಕು. ನಾನು ಯಾವುದೇ ಹೆಸರನ್ನು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಪೊಲೀಸರು ಎಲ್ಲ ಆಯಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಒಡ್ಡಿದವರು ಯಾರೇ ಆಗಿದ್ದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಎಲ್ಲೇ ಇದ್ದರೂ ಕರೆತಂದು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ತನಿಖೆ ಬಗ್ಗೆ ವಿಶ್ವಾಸ ಇದೆ. ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post