ಮಂಗಳೂರು, ಜೂನ್ 30: ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಿಐಡಿ ಮತ್ತು ಸಿಬಿಐ ಅಧಿಕಾರಿಗಳ ತನಿಖೆಗೆ ಒಳಪಟ್ಟಿದ್ದೇವೆ. ಅವರು ನಡೆಸಿರುವ ಎಲ್ಲ ರೀತಿಯ ತನಿಖೆಗೂ ಸಹಕರಿಸಿದ್ದೇವೆ. ನಮ್ಮನ್ನು ಸಿಬಿಐ ಅಧಿಕಾರಿಗಳು ಆರೋಪಿಗಳಲ್ಲ ಎಂದು ಹೇಳಿದ್ದರೂ, ತಿಮರೋಡಿ ಮಹೇಶ್ ಶೆಟ್ಟಿ ಮಾತ್ರ ನಮ್ಮನ್ನೇ ಆರೋಪಿಗಳೆಂದು ಹೇಳುತ್ತಿದ್ದಾರೆ. ಅವರೇ ಹೇಳಿದಂತೆ, ನಾವು ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಕರೆಯುತ್ತೇವೆ. ತಿಮರೋಡಿ ಮತ್ತು ಅವರ ತಂಡದವರು ದೈವದ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಧರ್ಮಸ್ಥಳದ ಧೀರಜ್ ಜೈನ್ ಸವಾಲು ಹಾಕಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರದ ಪ್ರಮುಖರ ವಿರುದ್ಧ ಆರೋಪ ಮಾಡಿ, ಮುಗ್ಧ ಜನರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ಸಿಬಿಐ ತನಿಖೆ ನಡೆಸುವಾಗ, ಸಾಕ್ಷಿಯ ಹೇಳಿಕೆ ನೀಡಲು ಹಿಂದೇಟು ಹಾಕಿದರು. ಯಾರ ಮೇಲೆ ಆರೋಪ ಮಾಡಲಾಗಿತ್ತೋ ಅವರು ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಈಗ ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಆರೋಪ ಮಾಡುವ ವ್ಯಕ್ತಿಗೆ ನಿಜವಾದ ಕಾಳಜಿ ಇದ್ದರೆ, ನೈಜ ಆರೋಪಿಗಳ ಬಂಧನಕ್ಕೆ ಹಾಗೂ ಪೊಲೀಸ್ ತನಿಖೆಯ ವಿರುದ್ಧ ಧರಣಿ ನಡೆಸಲಿ’ ಎಂದರು.
ಬೆಳ್ತಂಗಡಿಯ ಧೀರಜ್ ಜೈನ್ ಮಾತನಾಡಿ, ‘ನಮ್ಮ ಮೇಲೆ ಆರೋಪ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಜತೆಗಿದ್ದವರಿಗೆ ಆರೋಪದ ಬಗ್ಗೆ ದೃಢತೆ ಇದ್ದರೆ, ತುಳುನಾಡಿನ ಆರಾಧ್ಯ ಕ್ಷೇತ್ರವಾದ ಕಾನತ್ತೂರು ದೈವ ಕ್ಷೇತ್ರಕ್ಕೆ 10 ದಿನಗಳೊಳಗೆ ಬಂದು ಪ್ರಮಾಣ ಮಾಡಲಿ. ನಾವು ದೈವದ ಸಮ್ಮುಖದಲ್ಲಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ಹಿಂದೆಯೂ ಪ್ರಮಾಣಕ್ಕೆ ಕರೆದಾಗ ಅವರು ಬಂದಿರಲಿಲ್ಲ. ಈಗಲಾದರೂ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.
‘ಈ ಹಿಂದೆ ಸಿಐಡಿ, ಸಿಬಿಐ ತನಿಖಾ ಸಂಸ್ಥೆಗಳು ಎರಡು ಬಾರಿ ನನ್ನನ್ನು ಹಾಗೂ ಮಲ್ಲಿಕ್ ಜೈನ್, ಉದಯ ಜೈನ್ ಅವರನ್ನು ತನಿಖೆಗೆ ಒಳಪಡಿಸಿವೆ. ಸಿಬಿಐ ತಂಡವು ರಕ್ತ ಪರೀಕ್ಷೆ, ಡಿಎನ್‌ಎ, ಮಂಪರು ಪರೀಕ್ಷೆ (ಬ್ರೇನ್ ಮ್ಯಾಪಿಂಗ್), ಮೊಬೈಲ್ ಲೊಕೇಷನ್ ಪತ್ತೆ, ಸುಳ್ಳು ಪತ್ತೆ (ಪಾಲಿಗ್ರಾಫ್ ಟೆಸ್ಟ್), ಇನ್ನೂ ಅನೇಕ ರೀತಿ ವೈಜ್ಞಾನಿಕ ವಿಧದಲ್ಲಿ ತನಿಖೆಗೆ ಒಳಪಡಿಸಿದೆ. ಅಮಾಯಕ ಯುವತಿಯ ಸಾವಿಗೆ ನ್ಯಾಯ ಸಿಗಲಿ ಎಂಬ ಕಾರಣಕ್ಕೆ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. 2015ರ ಸಿಬಿಐ ಚಾರ್ಜ್ ಶೀಟ್‌ನಲ್ಲೂ ನಮ್ಮನ್ನು ಆರೋಪಿಗಳು ಎಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ನಂತರ ಸಿಬಿಐ ಕೋರ್ಟ್ ನಮ್ಮನ್ನು ನಿರಪರಾಧಿಗಳು ಎಂದು ಆದೇಶ ನೀಡಿದ್ದರೂ, ನಮ್ಮ ಮೇಲೆ ಈಗಲೂ ಆರೋಪ ಮಾಡಲಾಗುತ್ತಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕ್ ಜೈನ್, ಉದಯ ಜೈನ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post