ಮಂಗಳೂರು: ಕಡಗರವಳ್ಳಿ ಹಾಗೂ ಎಡಕುಮೇರಿ ಮಧ್ಯೆ ರೈಲು ಮಾರ್ಗದಲ್ಲಿ ಆಗಿರುವ ಭೂಕುಸಿತ, ಅಲ್ಲಿನಡೆಯುತ್ತಿರುವ ದುರಸ್ತಿ ಕೆಲಸಗಳ ಪರಿಶೀಲನೆಗೆ ವಿಶೇಷ ಪರಿಶೀಲನಾ ರೈಲಿನಲ್ಲಿ ನೈಋತ್ಯ ರೈಲ್ವೇ ಮಹಾಪ್ರಬಂಧಕರು ಸೋಮವಾರ ಆಗಮಿಸಿದ್ದಾರೆ. ಆಗಬೇಕಾದ ಕೆಲಸಗಳನ್ನು ಮನಗಂಡು, ಅಗತ್ಯವಿರುವ ತಾಂತ್ರಿಕ ಸಲಹೆ ನೀಡುವುದಕ್ಕಾಗಿ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಅವರು ಈ ರೈಲಿನಲ್ಲಿ ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳ ಪರಿಶೀಲಿಸಿ, ಭೂಕುಸಿತ ಪ್ರದೇಶದಲ್ಲಿ ಸುಧಾರಣ ಕೆಲಸಗಳ ಪ್ರಗತಿ ವೀಕ್ಷಿಸಿ, ದುರಸ್ತಿ ಕೆಲಸದಲ್ಲಿ ಆಗಬೇಕಿರುವ ಸುರಕ್ಷಾ ಕ್ರಮಗಳನ್ನು ಸೂಚಿಸಿದರು. ಈ ವೇಳೆ ಮಾತನಾಡಿದ ಶ್ರೀವಾಸ್ತವ, ಸುರಕ್ಷೆ, ತ್ವರಿತವಾದ ದುರಸ್ತಿ ಕಾರ್ಯಗಳು ನಮ್ಮ ಆದ್ಯತೆ, ಇದರಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಸುರಿಯುವ ನಡುವೆ ನಿರಂತರವಾಗಿ ದುರಸ್ತಿ ಕಾರ್ಯಗಳು ನಡೆಯುತ್ತಿವೆ. ಸುಮಾರು 50 ಅಡಿ ಭೂಕುಸಿತವಾದ ಹಿನ್ನೆಲೆಯಲ್ಲಿ ತಳದಿಂದಲೇ ಮರಳುಚೀಲ, ಬಂಡೆಗಳ ನ್ನಿರಿಸಿ ಜಾರದಂತೆ ಗೇಬಿಯನ್ ಮೆಷ್‌ನೊಂದಿಗೆ ದುರಸ್ತಿ ನಡೆಸಲಾಗುತ್ತಿದೆ. ಹಗಲು ರಾತ್ರಿ ನಿರಂತರ ಕೆಲಸ ಮಾಡಿದರೂ ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗಿದೆ. ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ, ದುರಸ್ತಿಗೆ ಬೇಕಾದ ಎಲ್ಲ ವಸ್ತುಗಳನ್ನು ರೈಲಿನ ವ್ಯಾಗನ್ ಮೂಲಕವೇ ತರಬೇಕಾಗುತ್ತದೆ. ಇದೂ ಸಹ ಕಾಮಗಾರಿಗೆ ಅಡ್ಡಿಯಾಗಿದೆ.
ಕೆಎಸ್‌ಆರ್ ಬೆಂಗಳೂರು-ಕಣ್ಣೂರು ರೈಲು ಸಂಖ್ಯೆ (16511) ರೈಲು, ಬೆಂಗಳೂರು-ಕಾರವಾರ ಕೆಎಸ್‌ಆರ್ ಎಕ್ಸ್‌ಪ್ರೆಸ್ (16595), ಕಣ್ಣೂರು-ಬೆಂಗಳೂರು (16512) ರೈಲು, ಕಾರವಾರ-ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16596) ರೈಲು, ಬೆಂಗಳೂರು-ಮುರುಡೇಶ್ವರ (16585) ರೈಲು, ಮುರ್ಡೇಶ್ವರ- ಬೆಂಗಳೂರು (16586) ರೈಲನ್ನು ರದ್ದುಗೊಳಿಸಲಾಗಿದೆ.ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ (07377) ರೈಲು, ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್ -ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07378) ರೈಲು ಸಂಚಾರ ರದ್ದಾಗಿವೆ.
Discover more from Coastal Times Kannada
Subscribe to get the latest posts sent to your email.
Discussion about this post