ಉಳ್ಳಾಲ: ನಗರಸಭೆಯ ಅಧ್ಯಕ್ಷೆಯಾಗಿ ಕಾಂಗ್ರೆಸ್ಸಿನ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನ ಹರೀಶ್ ಆಯ್ಕೆಯಾಗಿದ್ದಾರೆ. ಉಳ್ಳಾಲ ನಗರ ಸಭೆಯ ಎರಡನೇ ಆಡಳಿತಾವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಗರಸಭೆಯ ಸಭಾಂಗಣದಲ್ಲಿ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್ ನ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನಾ ಹರೀಶ್ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ)ದ ಮಹಿಳೆಗೆ ಮೀಸಲಿರಿಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶಶಿಕಲಾ, ಬಿಜೆಪಿಯಿಂದ ಭವಾನಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಸಪ್ನ ಹರೀಶ್, ಬಿಜೆಪಿಯಿಂದ ನಮಿತ ಗಟ್ಟಿ, ಎಸ್ ಡಿಪಿಐ ಯಿಂದ ಝರೀನ ರವೂಫ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಶಶಿಕಲಾ ಪರ 23 ಮತಗಳು, ಬಿಜೆಪಿಯ ಭವಾನಿ ಪರ 6 ಮತಗಳು ಚಲಾವಣೆ ಆಗಿದ್ದು, ಇಬ್ಬರು ನಗರ ಸಭೆ ಸದಸ್ಯರಾದ ಬಶೀರ್ ಹಾಗೂ ದಿನಕರ್ ಉಳ್ಳಾಲ ಮತ ಚಲಾಯಿಸದೆ ತಟಸ್ಥರಾದರು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಸಪ್ನಾ ಹರೀಶ್ ಪರ 17 ಮತಗಳು, ಎಸ್ ಡಿಪಿಐ ಯ ಝರೀನ ರವೂಫ್ ಪರ 6 ,ಬಿಜೆಪಿಯ ನಮಿತ ಗಟ್ಟಿಯ ಪರ 6 ಮತಗಳು ಚಲಾವಣೆ ಆದವು. ಇಬ್ಬರು ನಗರ ಸಭೆ ಸದಸ್ಯರು ತಟಸ್ಥರಾದರು.
23 ಮತ ಪಡೆದ ಶಶಿಕಲಾ ಅಧ್ಯಕ್ಷರಾಗಿ,17 ಮತಗಳನ್ನು ಪಡೆದ ಕಾಂಗ್ರೆಸ್ ನ ಸಪ್ನ ಹರೀಶ್ ಉಪಾಧ್ಯಕ್ಷೆಯಾಗಿ ಆಯ್ಕೆ ಆದರು. ಸಹಾಯಕ ಆಯುಕ್ತ ಹರ್ಷವರ್ಧನ್ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಉಳ್ಳಾಲ ನಗರ ಸಭೆಯ ಒಟ್ಟು 31 ಸ್ಥಾನ ಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4, ಎಸ್ ಡಿಪಿಐ 6 ಹಾಗೂ ಇಬ್ಬರು ಪಕ್ಷೇತರರು ಸ್ಥಾನ ಪಡೆದಿದ್ದಾರೆ. ಈ ಪೈಕಿ ಜೆಡಿಎಸ್ ನ ನಾಲ್ವರು ಸದಸ್ಯರ ಪೈಕಿ ಮೂವರು ಜೆಡಿಎಸ್ ಗೆ ರಾಜೀನಾಮೆ ನೀಡಿದ್ದು, ಇವರಲ್ಲಿ ಇಬ್ಬರು ಕಾಂಗ್ರೆಸ್ ಗೆ ಸೇರಿದ್ದರು. ಉಳ್ಳಾಲ ನಗರ ಸಭೆಯ ಕಾಂಗ್ರೆಸ್ ಆಡಳಿತದ ಮೊದಲ ಹಂತದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ ,2023 ಮೇ ತಿಂಗಳಲ್ಲಿ ಕೊನೆಗೊಂಡಿತ್ತು.
ಕೈ ಪಕ್ಷಕ್ಕೆ ಮತ ಚಲಾಯಿಸಿದ ಎಸ್ಡಿಪಿಐ ಸದಸ್ಯರು: ನಗರಸಭೆಯ ಅಧ್ಯಕ್ಷ ಗಾದಿಗೆ ಸ್ಫರ್ಧಿಸಿದ್ದ ಶಶಿಕಲಾ ಗೆಲ್ಲಲು ಬೇಕಾದ ಸಂಖ್ಯಾ ಬಲ ಇದ್ದರೂ, ಎಸ್ಡಿಪಿಐ ನ ಆರು ನಗರ ಸದಸ್ಯರು ಕೈ ಎತ್ತಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಎಸ್ಡಿಪಿಐನ ಝರೀನ ರವೂಫ್ ಸ್ಫರ್ಧಿಸಿದ್ದರು. ನಗರಸಭೆ ಮೊದಲ ಅವಧಿಯಲ್ಲಿ ಎಸ್ಡಿಪಿಐನ ಝರೀನ ರವೂಫ್ ಕೈ ಪಕ್ಷದ ಕೌನ್ಸಿಲರ್ಗಳ ಬೆಂಬಲದಿಂದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post