ಮಂಗಳೂರು, ಸೆ 30 :ಮಂಗಳೂರು: ಜಾಗ ಮಾರಾಟಕ್ಕೆ ಸಂಬಂಧಿಸಿ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಲಂಚ ಪಡೆದ ಆರೋಪದ ಮೇರೆಗೆ ಮಂಗಳೂರು ತಹಶೀಲ್ದಾರ್ ಪುರಂದರ ಹಾಗೂ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಿವಾನಂದ ನಾಟ್ಯಾಕರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ನಗರದ ಕಾವೂರು ನಿವಾಸಿಯೊಬ್ಬರು ಜಾಗ ಮಾರಾಟಕ್ಕೆ ಎನ್ಓಸಿ ನೀಡುವಂತೆ ತಹಶೀಲ್ದಾರ್‌ಗೆ ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ‘ಕೆಲಸ ಮಾಡಿಕೊಡಬೇಕಾದರೆ ತನಗೆ ಹಾಗೂ ತಹಶೀಲ್ದಾರ್‌ಗೆ ಲಂಚ ಕೊಡಬೇಕು ಎಂದು ಶಿವಾನಂದ ಬೇಡಿಕೆ ಇಟ್ಟಿದ್ದಾರೆ‘ ಎಂಬುದಾಗಿ ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.


‘ಅರ್ಜಿದಾರರಿಂದ ₹ 4,700 ಲಂಚದ ಹಣ ಪಡೆದ ಶಿವಾನಂದ ಅವರನ್ನು ಬಂಧಿಸಿದ್ದೇವೆ. ಲಂಚದ ಹಣದಲ್ಲಿ ತಹಶೀಲ್ದಾರ್ ಅವರಿಗೂ ಪಾಲು ಇತ್ತು. ಹಾಗಾಗಿ ತಹಶೀಲ್ದಾರ್ ಪುರಂದರ ಅವರನ್ನೂ ಬಂಧಿಸಿದ್ದೇವೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ‘ಬಂಧಿತರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದೇವೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ತಿಳಿಸಿದ್ದಾರೆ. ಶಿವಾನಂದ ನಾಟೇಕರ್ ಈ ಹಿಂದೆ ಕಾವೂರಿನಲ್ಲಿ ವಿಎ ಆಗಿದ್ದು ಅಲ್ಲಿಯೂ ಲಂಚಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದು ಅಮಾನತಾಗಿದ್ದ. ಇತ್ತೀಚೆಗಷ್ಟೇ ಮಂಗಳೂರು ತಾಲೂಕು ಕಚೇರಿಗೆ ನಿಯೋಜನೆಗೊಂಡಿದ್ದ ಎನ್ನಲಾಗಿದೆ. ಎಸಿಬಿ ರದ್ದುಗೊಂಡು ಲೋಕಾಯುಕ್ತಕ್ಕೆ ಮರಳಿ ಅಧಿಕಾರ ದೊರಕಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಕರಣ ಇದಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post