ಮಂಗಳೂರು, ಅ.29 : ಇಂಗ್ಲೆಂಡಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಂಗಳೂರು, ಉಡುಪಿ ಜಿಲ್ಲೆಯ ಹಲವಾರು ಮಂದಿಯಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಬೆಂಗಳೂರಿನ ದಂಪತಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಆನೇಕಲ್ ತಾಲೂಕಿನ ವೀವರ್ಸ್ ಕಾಲೊನಿ ನಿವಾಸಿ ಪ್ರಕೃತಿ ಯು. (34) ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿ ಚರ್ಚ್ ರೋಡ್ ನಿವಾಸಿ ಆಲ್ಬನ್ ರೆಬೇರೊ(42) ಬಂಧಿತರು. ಇವರು ಪ್ರೀತಿಸಿ ಮದುವೆಯಾಗಿದ್ದು ಬೆಂಗಳೂರಿನ ಆನೆಕಲ್ ನಲ್ಲಿಯೇ ನೆಲೆಸಿದ್ದರು. ಆನ್ಲೈನ್ ಮತ್ತು ಒಬ್ಬರಿಂದ ಒಬ್ಬರಿಗೆ ಪರಿಚಯವಾಗಿ ವಿದೇಶದಲ್ಲಿ ಕೆಲಸ ಮಾಡಿಸಿಕೊಡುತ್ತಾರೆಂಬ ನಂಬಿಕೆಯಲ್ಲಿ ನೂರಾರು ಮಂದಿ ಹಣ ಕೊಟ್ಟು ಮೋಸ ಹೋಗಿದ್ದಾರೆ.
ಪ್ರತಿ ವ್ಯಕ್ತಿಯಿಂದಲೂ 3ರಿಂದ 4 ಲಕ್ಷ ರೂಪಾಯಿ ಹಣ ಪಡೆದಿದ್ದು, ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರುವ ಆರೋಪಗಳಿವೆ. ಕಾವೂರು ಠಾಣೆಯಲ್ಲಿ 30ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದು, ಇದರಂತೆ ಎಫ್ಐಆರ್ ದಾಖಲಾಗಿದೆ. ಹಣ ಕಳಕೊಂಡವರು ಹೆಚ್ಚಿನವರು ಕ್ರಿಶ್ಚಿಯನ್ನರೇ ಆಗಿದ್ದು, ಇಂಗ್ಲೆಂಡ್ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಹಣ ಕಟ್ಟಿದ್ದರು.
ಬೆಂಗಳೂರಿನ ಆನೆಕಲ್ ನಲ್ಲಿ ಪಬ್ಲಿಕ್ ಸ್ಕೂಲ್ ಎಂಬ ಹೆಸರಲ್ಲಿ ಇವರು ಶಾಲೆ ನಡೆಸಿಕೊಂಡಿದ್ದಾರೆ. ಇವರ ಮನೆಗೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿಗಳಿಂದ 24 ಪಾಸ್‌ಪೋರ್ಟ್‌ಗಳು, 43 ಗ್ರಾಂ ಬಂಗಾರ (ಅಂದಾಜು ಮೌಲ್ಯ 4,30,000 ರೂ.) ಮತ್ತು 2 ಮೊಬೈಲ್‌ಗಳನ್ನು ಬೆಂಗಳೂರಿನಲ್ಲಿ ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಕಾವೂರು ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು, ಎಸ್ಸೈ ಮಲ್ಲಿಕಾರ್ಜುನ ಬಿರಾದಾರ, ಸಿಬ್ಬಂದಿಗಳಾದ ನಾಗರತ್ನ, ರಾಘವೇಂದ್ರ, ಪ್ರವೀಣ್, ರಿಯಾಝ್ ಕಾರ್ಯಾಚರಣೆ ನಡೆಸಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post