ಮಂಗಳೂರು, ಅ.30: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶ ದ್ವಾರದಿಂದ ಬಜ್ಪೆವರೆಗಿನ ರಾಜ್ಯ ಹೆದ್ದಾರಿ ಹೊಂಡ ಗುಂಡಿಗಳಿಂದ ಕೂಡಿದ್ದು, ಡಾಂಬರು ಕಳಚಿ ಹೋಗಿ ತೀವ್ರ ಹದಗೆಟ್ಟಿದೆ. ಸಂಬಂಧಿಸಿದ ಇಲಾಖೆ ಮುಂದಿನ 15 ದಿನದ ಒಳಗೆ ಈ ರಸ್ತೆಯನ್ನು ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ದ.ಕ. ಜಿಲ್ಲಾ ಸಮಿತಿ ಹಾಗೂ ಮಂಗಳೂರು ತಾಲೂಕು ಸಮಿತಿ ಎಚ್ಚರಿಸಿದೆ.
ವಿಮಾನ ನಿಲ್ದಾಣದ ಪ್ರವೇಶ ದ್ವಾರದಿಂದ ಬಜ್ಪೆವರೆಗಿನ ರಸ್ತೆಯು ಇತ್ತೀಚಿನ ಭಾರೀ ಮಳೆಯಿಂದಾಗಿ ಡಾಂಬರು ಸಂಪೂರ್ಣವಾಗಿ ಕಳಚಿ ಹೋಗಿ ರಸ್ತೆಯಲ್ಲಿ ಅಪಾಯಕಾರಿ ಹೊಂಡ-ಗುಂಡಿಗಳು ನಿರ್ಮಾಣವಾಗಿದೆ. ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪ್ರಯಾಣಿಸುವುದೇ ಕಷ್ಟಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲ ದ್ವಿಚಕ್ರ ವಾಹನ ಸವಾರರು ಈ ಭಾಗದಲ್ಲಿ ಅಪಾಯಕಾರಿ ಗುಂಡಿ ತಪ್ಪಿಸಲು ಹೋಗಿ ತಮ್ಮ ವಾಹನ ಸಮೇತ ರಸ್ತೆ ಗುಂಡಿಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಬಜ್ಪೆವರೆಗಿನ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮಂಗಳೂರು-ಕಾವೂರು- ಬಜ್ಪೆ- ಕಿನ್ನಿಗೋಳಿ ಮಾರ್ಗವಾಗಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯು ಜನ ಸಾಮಾನ್ಯರು, ಕೂಲಿಕಾರ್ಮಿಕರು, ಶಿಕ್ಷಣ ಸಂಸ್ಥೆಗಳು. ವಿದ್ಯಾರ್ಥಿಗಳು, ಧಾರ್ಮಿಕ ಕ್ಷೇತ್ರಗಳು, ಖಾಸಗಿ ನೌಕರರು ಹಾಗೂ ಸರಕಾರಿ ನೌಕರರಿಗೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಬೇರೆ ಬೇರೆ ಕಡೆಗಳಿಗೆ ಪ್ರಯಾಣಿಸಲು ಇರುವ ಏಕೈಕ ನೇರ ಸಂಪರ್ಕ ರಸ್ತೆಯಾಗಿದೆ. ಮುಲ್ಕಿ-ಬೆಳ್ಮಣ್ ಭಾಗಗಳಿಂದಲೂ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಈ ರಸ್ತೆಯೇ ಅತೀ ಸುಲಭದ ರಸ್ತೆಯಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದುದರಿಂದ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದರೂ, ಸಂಬಂಸಿದ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಈ ರಸ್ತೆಯಲ್ಲಿ ಅನೇಕ ಬಾರಿ ಪ್ರಯಾಣಿಸಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಈ ರಸ್ತೆ ಅವ್ಯವಸ್ಥೆ ಬಗ್ಗೆ ದ.ಕ. ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳಿಗೆ ಮನವಿ ನೀಡಿ, ದುರಸ್ತಿಗೆ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದಿಸದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ಅನಿವಾರ್ಯ ಎಂದರು.
ದಸಂಸ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ., ಮಂಗಳೂರು ತಾಲೂಕು ಸಮಿತಿ ಖಜಾಂಚಿ ರುಕ್ಕಯ್ಯ ಅಮೀನ್ ಕರಂಬಾರು, ಮಂಗಳೂರು ತಾಲೂಕು ಸಂಘಟನಾ ಸಂಚಾಲಕಿ ಗೀತಾ ಕರಂಬಾರು ಉಪಸ್ಥಿತರಿದ್ದರು.

Discover more from Coastal Times Kannada
Subscribe to get the latest posts sent to your email.







Discussion about this post