ಮಂಗಳೂರು, ಡಿ. 29: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಉಳಾಯಿಬೆಟ್ಟು ಗ್ರಾಮದ ಫೆರ್ಮಾಯ್ ಚರ್ಚ್ ಬಳಿಯ ನಿವಾಸಿ ಮನೋಹರ್ ಪಿರೇರಾ (47) ಅವರ ಮನೆಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಕುಟುಂಬಸ್ಥರ ಅಹವಾಲು ಆಲಿಸಿದ್ದಾರೆ.
ಮನೋಹರ್ ಪಿರೇರಾ ಡಿ.17ರಂದು ಆತ್ಮ ಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಾರಣ ಎಂದು ಹೇಳಿ ತಮ್ಮ ಕೊನೆಯ ವಾಟ್ಸಾಪ್ ವಿಡಿಯೋ ಮಾಡಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ತನ್ನ ಸಾಲವನ್ನು ಮರುಪಾವತಿಸಲು ನೀಡಿದ ಹಣವನ್ನು ಸಾಲಕ್ಕೆ ಜಮೆ ಮಾಡದೆ 9 ಲಕ್ಷ ರೂಪಾಯಿ ಯನ್ನು ಅನಿಲ್ ಲೋಬೊ ತಿಂದಿದ್ದಾನೆ ಎಂದು ಹೇಳಿದ್ದರು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 108 ಅಡಿಯಲ್ಲಿ ಅನಿಲ್ ಲೋಬೊ ರನ್ನು ಬಂಧಿಸಲಾಗಿತ್ತು. ಮನೋಹರ್ ಪಿರೇರಾ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ಪರಿಸರದ ನೂರಾರು ಮಂದಿಯ ಸಹಿಯನ್ನೊ ಳಗೊಂಡ ಮನವಿಯನ್ನು ರಾಜ್ಯದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮುಖ್ಯಮಂತ್ರಿಗಳು, ಗೃಹಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಅವರಿಗೆ ನೀಡಲಾಗಿತ್ತು. ಮನವಿಗೆ ಸ್ಪಂದಿಸಿದ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ನಿಷ್ಪಕ್ಷ ತನಿಖೆಗೆ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿರುತ್ತಾರೆ. ಎಂಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊನಿಂದ ತೊಂದರೆಗೊಳಗಾದ ಇತರ ಗ್ರಾಹಕರು ಸ್ಥಳದಲ್ಲಿ ಹಾಜರಿದ್ದು ತಮ್ಮ ಅಳಲನ್ನು ಯು.ಟಿ. ಖಾದರ್ ಬಳಿ ತೋಡಿಕೊಂಡರು. ಸ್ಥಳೀಯರು ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ಬಳಿ ದಿವಂಗತ ಮನೋಹರ್ ಅವರ ಬದುಕಿನ ಕಷ್ಟಗಳನ್ನು ವಿವರಿಸಿದರು. ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post