ಮಂಗಳೂರು: ಮಂಗಳೂರು, ಜುಲೈ 30: ರಾಜ್ಯದ ಮುಖ್ಯಮಂತ್ರಿ ಕೋಮು ವೈಷಮ್ಯದ ಕಾರಣಕ್ಕೆ ಕೊಲೆಯಾದ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ್ದಾಗ, ಅದಕ್ಕೂ ಹಿಂದೆ ಕೊಲೆಯಾಗಿದ್ದ ಮುಸ್ಲಿಂ ಯುವಕನ ಮನೆಗೆ ಭೇಟಿ ನೀಡಿಲ್ಲ ಅನ್ನುವುದು ಮುಸ್ಲಿಂ ಸಂಘಟನೆಗಳ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಶಾಂತಿ ಸಭೆಯನ್ನು ಮುಸ್ಲಿಂ ಸಂಘಟನೆಗಳು ಬಹಿಷ್ಕರಿಸಿದ್ದವು. ಹತ್ಯೆಗೊಳಗಾದ ಕಳೆಂಜ ಗ್ರಾಮದ ಮಸೂದ್ ಹಾಗೂ ಸುರತ್ಕಲ್ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಝಿಲ್ ಕುಟುಂಬಗಳಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯು ತಲಾ 30 ಲಕ್ಷ ಪರಿಹಾರ ಘೋಷಣೆ ಮಾಡಿದೆ.
‘ಕಮಿಟಿಯ ಅಧ್ಯಕ್ಷರಾದ ಕೆ.ಎಸ್. ಮೊಹಮ್ಮದ್ ಮಸೂದ್ ನೇತೃತ್ವದಲ್ಲಿ ಕಮಿಟಿಯ ಮುಖಂಡರು ಶನಿವಾರ ಸಭೆ ನಡೆಸಿದ್ದೇವೆ. ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬದವರನ್ನು ಭೇಟಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ಪ್ರವೀಣ್ ಅವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರವನ್ನೂ ನೀಡಿದ್ದಾರೆ. ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಇಬ್ಬು ಯುವಕರ ಹತ್ಯೆ ನಡೆದಿದ್ದರೂ ಅವರ ಕುಟುಂಬಗಳನ್ನು ಮುಖ್ಯಮಂತ್ರಿಯವರು ಭೇಟಿಯೂ ಮಾಡಿಲ್ಲ, ಅವರಿಗೆ ಪರಿಹಾರವನ್ನೂ ನೀಡಿಲ್ಲ. ಸರ್ಕಾರ ಈ ತಾರತಮ್ಯ ನೀತಿಯನ್ನು ಖಂಡಿಸಿ, ನಾವೇ ದೇಣಿಗೆ ಸಂಗ್ರಹಿಸಿ ಸಂತ್ರಸ್ತ ಕುಟುಂಬಗಳಿಗೆ ನೀಡುವ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಕಮಿಟಿಯ ಉಪಾಧ್ಯಕ್ಷ ಬಿ.ಎಂ. ಮುಮ್ತಾಜ್ ಅಲಿ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post