ಮಂಗಳೂರು: ‘ಬಿಲ್ಲವ ನಿಗಮ ಸ್ಥಾಪನೆ ಮಾಡಬೇಕು, ಕುಲಕಸುಬು ಕೈಗೊಳ್ಳಲು ಸ್ವಾತಂತ್ರ್ಯ ನೀಡಬೇಕು, ಬಿಲ್ಲವ, ಈಡಿಗ ನಾಮಧಾರಿ ಮತ್ತಿತರ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಜನವರಿ 6ರಿಂದ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲಾಗುವುದು’ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಆಕ್ರೋಶಿತರಾದ ಸ್ವಾಮೀಜಿ ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸದೆ ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದೀಗ ಸರ್ಕಾರ ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪಿಸಲು ಹೊರಟಿದೆ. ಇದರಲ್ಲಿ ಹಿಂದೆ-ಮುಂದೆ ಯಾವುದು ಇಲ್ಲ. ಮೇಲಿನ ವರ್ಗದವರಿಗೆ ನಿಗಮ ಕೊಡುವ ರಾಜ್ಯ ಸರ್ಕಾರ ನಮ್ಮ ಮಾತಿಗೆ ಸೊಪ್ಪು ಹಾಕುತ್ತಿಲ್ಲ. ಇದು ಸರ್ಕಾರದ ನಾಟಕ ಎಂದು ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪನೆ ಕುರಿತ ರಾಜ್ಯ ಸರ್ಕಾರದ ಆದೇಶ ಪ್ರತಿಯನ್ನು ಹರಿದು ಹಾಕಿದರು.
ಜ.6ರಂದು ಪಾದಯಾತ್ರೆ: ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.6ರಂದು ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಿಂದ ಬೆಂಗಳೂರುವರೆಗೆ 658 ಕಿ.ಮೀ. ದೂರದ ಒಟ್ಟು 35 ದಿನ ಪಾದಯಾತ್ರೆ ನಡೆಯಲಿದೆ. ಈಡಿಗರು ಹೆಚ್ಚು ಇರುವ ಮತ್ತು ಶೇಂದಿ ಮಾರಾಟಕ್ಕೆ ಅವಕಾಶ ಇರುವ ತೆಲಂಗಾಣ ಮತ್ತು ಕೇರಳದ ಮುಖ್ಯಮಂತ್ರಿಗಳು, ಸಚಿವರು, ಶಾಸಕರನ್ನು ಆಹ್ವಾನಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಪಾದಯಾತ್ರೆಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಚಾಲನೆ ನೀಡಲಿದ್ದಾರೆ. ಬಳಿಕ ಪಾದಯಾತ್ರೆ ಉಡುಪಿ, ಬ್ರಹ್ಮಾವರ, ಮಾಸ್ತಿಕಟ್ಟೆ ಹೊಸನಗರವಾಗಿ ತೀರ್ಥಹಳ್ಳಿ, ಸಾಗರ, ಶಿವಮೊಗ್ಗ, ಚೆನ್ನಗಿರಿ, ಶಿಕಾರಿಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಸುಮಾರು 35 ದಿನಗಳವರೆಗೆ ಈ ಪಾದಯಾತ್ರೆಯು ದಿನಕ್ಕೆ 20 ಕಿ.ಮೀ.ನಂತೆ ಸಾಗಿದ ಬಳಿಕ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ತಾವು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇವೆ ಎಂದು ಸ್ವಾಮೀಜಿ ಘೋಷಿಸಿದರು.
ಸೈಟ್, ಫಾರ್ಚುನರ್ ಆಫರ್? : ಸಮುದಾಯದವರ ಪರವಾಗಿ ಹೋರಾಡುತ್ತಿರುವ ತಮ್ಮನ್ನು ಸುಮ್ಮನಾಗಿಸಲು ಪ್ರಯತ್ನ ನಡೆಯುತ್ತಿದೆ. ಬೆದರಿಕೆ ರೂಪದ ಮಾತುಗಳ ಜೊತೆ ಆಫರ್‌ಗಳು ಕೂಡ ಬರುತ್ತಿವೆ. ಒಬ್ಬರು ಬೆಂಗಳೂರಿನಲ್ಲಿ 2 ಸೈಟ್, 1 ಫಾರ್ಚುನರ್ ವಾಹನ ಮತ್ತು ಎಂಎಸ್‌ಐಎಲ್‌ನ 25 ಮಳಿಗೆಗಳನ್ನು ಕೊಡುವುದಾಗಿ ಹೇಳಿದ್ದಾರೆ. ಅವರು ಯಾರು ಎಂಬುದನ್ನು ಸಂದರ್ಭ ಬಂದಾಗ ಬಹಿರಂಗ ಮಾಡುವೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು. ಪಾದಯಾತ್ರೆ ಸಮಿತಿಯ ಅಧ್ಯಕ್ಷ ಜಿತೇಂದ್ರ ಸುವರ್ಣ, ಉಪಾಧ್ಯಕ್ಷ ರವಿ ಚಿಲಿಂಬಿ, ಮುಖಂಡರಾದ ರಂಜನ್ ಮಿಜಾರ್, ಸುನಿತಾ ಮತ್ತಿತರರು ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post