ಮಂಗಳೂರು, ಅ.31 : ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಆರೆಸ್ಸೆಸ್ ನಾಯಕರೊಬ್ಬರು ಮಾತನಾಡಿರುವ ವಿಡಿಯೋ ಒಂದನ್ನು ತನ್ನ ಫೇಸ್ಬುಕ್ ಜಾಲತಾಣದಲ್ಲಿ ಹಂಚಿಕೊಂಡ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಆನಂತರ, ಸೋಮವಾರ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿ ಬಿಡಲಾಗಿದೆ.
ವ್ಯಕ್ತಿಯೊಬ್ಬರು ಮಾತನಾಡುವ ವಿಡಿಯೋದಲ್ಲಿ ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಮಕ್ಕಳ ಲೆಕ್ಕವನ್ನು ತೆಗೆದು ನೋಡಿದ್ದೇನೆ. ಅದರಲ್ಲಿ ಒಟ್ಟು 47,700 ಮಕ್ಕಳಲ್ಲಿ 23200 ಮಕ್ಕಳು ಹಿಂದು ಮತ್ತು 22300 ಮಕ್ಕಳು ಅಲ್ಪಸಂಖ್ಯಾತರದ್ದು. 78 ಶೇಕಡಾ ಜನರಿಗೆ ಹುಟ್ಟಿದ ಮಕ್ಕಳು 23 ಸಾವಿರ, ಆದರೆ 28 ಶೇಕಡಾ ಜನರಿಗೆ ಹುಟ್ಟಿದ ಮಕ್ಕಳು 22 ಸಾವಿರ. ಹೀಗಾದಲ್ಲಿ ಇನ್ನೊಂದು 10-15 ವರ್ಷದಲ್ಲಿ ನಮ್ಮ ಊರು ಎಲ್ಲಿಗೆ ಮುಟ್ಟುತ್ತದೆ. ನಮ್ಮ ಮಕ್ಕಳಿಗೆ ನಾವು ಬೇಗ ಮದುವೆ ಮಾಡ್ತೀವಾ.. 25, 26, 27ರ ವಯಸ್ಸಿನಲ್ಲಿ ಕನಿಷ್ಠ ಮೂರು ಮಕ್ಕಳಾದರೆ ನಮ್ಮ ದೇಶ ಉಳೀತದೆ, ಈ ಬಗ್ಗೆ ನಾವೆಲ್ಲ ಸೇರಿ ನಿಶ್ಚಯ ಮಾಡೋಣ ಎಂದು ಹೇಳುವ ವಿಚಾರ ಇದೆ.
ಈ ಭಾಷಣದ ತುಣುಕಿನ ವಿಡಿಯೋವನ್ನು ಮುಸ್ಲಿಂ ಜನಸಂಖ್ಯೆ ಜಿಹಾದ್ ಮೆಟ್ಟಿ ನಿಲ್ಲೋಣ ಎಂದು ಹೇಳಿ ಶರಣ್ ಪಂಪ್ವೆಲ್ ಮತ್ತು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ. ಇದರ ಬಗ್ಗೆ ಕದ್ರಿ ಠಾಣೆಯ ಸಿಬಂದಿ ನಾಗರಾಜ್ ಮುಸ್ಲಿಮರ ಬಗ್ಗೆ ದ್ವೇಷ ಹುಟ್ಟುವ ರೀತಿ ಪೋಸ್ಟ್ ಷೇರ್ ಮಾಡಿದ್ದಾರೆಂದು ದೂರು ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ. ಇದರಂತೆ ಬಿಎನ್ಎಸ್ 353(2(), ಆರ್ ಡಬ್ಲ್ಯು 3(5) ಪ್ರಕಾರ ಕೇಸು ದಾಖಲಾಗಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಠಾಣೆಗೆ ಬಂದು ಪೊಲೀಸರ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿರುವ ವಿಡಿಯೋ ಬಗ್ಗೆ ಪ್ರಕರಣ ದಾಖಲಾಗಿದೆ. ಅವರು ತನ್ನ ಪೋಸ್ಟ್ ಡಿಲೀಟ್ ಮಾಡಿದ್ದು ಎಫ್ಐಆರ್ ವಿಚಾರ ತಿಳಿದು ಕದ್ರಿ ಠಾಣೆಗೆ ಬಂದಿದ್ದಾರೆ. ಸೋಮವಾರ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
 
			 
		    




 
                

Discussion about this post