ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಮೂರು ಪಿಕಪ್ ವಾಹನಗಳಲ್ಲಿ ಸಾಗಿಸುತ್ತಿದ್ದ ಎಂಟು ಜಾನುವಾರುಗಳನ್ನು ಪೊಲೀಸರು ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಲ್ಲಿ ಒಬ್ಬಾತ ಸ್ಥಳೀಯ ಬಿಜೆಪಿ ಕಾರ್ಯಕರ್ತ ಎಂದು ಗೊತ್ತಾಗಿದೆ.
‘ಹಾಸನ ಅರಕಲಗೂಡು ತಾಲ್ಲೂಕಿನ ಕಸಬಾ ಹೋಬಳಿಯ ಮರವಳಲು ಗ್ರಾಮದ ಚೆನ್ನಕೇಶವ (33 ವ), ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಹಿರೇಬೆಳಗುಳಿಯ ಸಂದೀಪ್ (27), ನಾವೂರು ಗ್ರಾಮದ ಒಳಗದ್ದೆ ಮನೆಯ ಪುಷ್ಪರಾಜ್ (20), ಮೋರ್ತಾಜೆ ಮನೆಯ ಪ್ರಮೋದ್ ಸಾಲ್ಯಾನ್ (49) ಈ ಪ್ರಕರಣ ಪ್ರಮುಖ ಆರೋಪಿಗಳು’ ಇವರಿಂದ ಸಾಗಾಟಕ್ಕೆ ಬಳಸಿದ ಮೂರು ವಾಹನಗಳು, 6 ದನ ಮತ್ತು 2 ಗಂಡು ಕರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಬಳಿ ಸೂಕ್ತ ದಾಖಲಾತಿಗಳು ಇಲ್ಲದೇ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧಾರದಲ್ಲಿ ಧರ್ಮಸ್ಥಳ ಠಾಣೆಯ ಪಿಎಸ್ಐ ಅನಿಲ ಕುಮಾರ್ ಡಿ. ನೇತೃತ್ವದ ಪೊಲೀಸರ ತಂಡ ವಾಹನವನ್ನು ತಡೆದು ಪರಿಶೀಲನೆ ನಡೆಸಿತ್ತು. ಆರೋಪಿಗಳ ವಿರುದ್ಧ 2020ರ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ, ಮೋಟಾರು ವಾಹನ ಕಾಯ್ದೆಗಳ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಶಕ್ಕೆ ಪಡೆದ ಜಾನುವಾರುಗಳ ಅಂದಾಜು ಮೌಲ್ಯ 65 ಸಾವಿರ ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 7 ಲಕ್ಷ ರೂ. ಸೇರಿದಂತೆ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ರೂ 7.65 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post