ಮಂಗಳೂರು, ಅ 06: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಯ ವೇಳೆ ಕಲ್ಲು ತೂರಾಟ ನಡೆಸಿರುವ ಘಟನೆ ಇನ್ನೂ ಮಾಸಿಲ್ಲ. ಸದ್ಯ ರಾಗಿಗುಡ್ಡದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ. ಈ ಮಧ್ಯೆ ಮಂಗಳೂರಿನ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈದ್ ಮಿಲಾದ್ ದಿನವೇ ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಗಲಭೆಗೆ ಯತ್ನಿಸಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗೇರು ಎಂಬಲ್ಲಿ ನಡೆದಿದೆ. ಸೆಪ್ಟೆಂಬರ್ 30ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹಬ್ಬದ ದಿನವೇ ಮಂಗಳೂರಿನಲ್ಲೂ ಶಾಂತಿ ಕದಡುವ ಪ್ರಯತ್ನ ನಡೆದಿದ್ದು, ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಅವರ ಸಮಯಪ್ರಜ್ಞೆಯಿಂದ ಸಂಭವಿಸುತ್ತಿದ್ದ ಭಾರೀ ಅನಾಹುತವೊಂದು ತಪ್ಪಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪುಚ್ಚೆಮೊಗೇರು ಎಂಬಲ್ಲಿನ ಗಣಪತಿ ಕಟ್ಟೆಯಲ್ಲಿ ಕಿಡಿಗೇಡಿಗಳು ಹಸಿರು ಬಾವುಟ ಇಟ್ಟಿದ್ದರು. ಈ ಬಗ್ಗೆ ಹೊಸಬೆಟ್ಟು ಪಿಡಿಒ ಶೇಖರ್ ಗಮನಕ್ಕೆ ತಂದರೂ ಬಾವುಟವನ್ನು ತೆರವು ಮಾಡದೆ ಬೇಜವಾಬ್ದಾರಿ ಮೆರೆದಿದ್ದರು ಎನ್ನಲಾಗಿದೆ.
ಈ ವಿಚಾರ ತಿಳಿದ ಕೂಡಲೇ ಇನ್ಸ್ಪೆಕ್ಟರ್ ಸಂದೇಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಪಿಡಿಒ ಶೇಖರ್ ಎನ್ನುವವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಗಣಪತಿ ಕಟ್ಟೆ ಮೇಲೆ ಬಾವುಟ ಹಾಕಲಿಕ್ಕೆ ಅನುಮತಿ ತೆಗೊಂಡಿದ್ದಾರಾ? ಎಂದು ಪಿಡಿಒರನ್ನು ಇನ್ಸ್ಪೆಕ್ಟರ್ ಪ್ರಶ್ನೆ ಮಾಡಿದ್ದಾರೆ. ಬಳಿಕ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಪೊಲೀಸ್ ಸಿಬ್ಬಂದಿ ಮೂಲಕ ಬಾವುಟ ತೆರವು ಮಾಡಿಸಿದ್ದಾರೆ. ಕಿಡಿಗೇಡಿಗಳು ಹಿಂದೂಗಳಿಗೆ ಸೇರಿದ್ದ ಕಟ್ಟೆಯಲ್ಲಿ ಹಸಿರು ಬಾವುಟ ಇಟ್ಟು ಮೂಡಬಿದ್ರೆ ಭಾಗದಲ್ಲಿ ಗಲಭೆಗೆ ಯತ್ನ ನಡೆಸಿದ್ದು, ಇನ್ಸ್ಪೆಕ್ಟರ್ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
Discover more from Coastal Times Kannada
Subscribe to get the latest posts sent to your email.
Discussion about this post