ಮಂಗಳೂರು: ಮಾದಕ ಪದಾರ್ಥ ಸೇವನೆ ವ್ಯಸನದ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಇಲ್ಲಿ ಬುಧವಾರ ಏರ್ಪಡಿಸಿದ್ದ ‘ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್’ ವಿನೂತನ ರೀತಿಯಲ್ಲಿ ಜನ ಜಾಗೃತಿ ಮೂಡಿಸಿತು. ಮಾದಕ ಪದಾರ್ಥಗಳ ಸೇವನೆ ಚಟದಿಂದ ಎದುರಾಗು ಸಮಸ್ಯೆಗಳ ಕರಾಳತೆ ಬಿಂಬಿಸುವ ಫಲಕಗಳನ್ನು ಕೈಯಲ್ಲಿ ಹಿಡಿದ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ ಹೆಜ್ಜೆ ಹಾಕುತ್ತಾ ಸಾಗಿತು.
ಟೌನ್ ಹಾಲ್ ಆವರಣದಲ್ಲಿ ವಾಕಥಾನ್’ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು ‘ತಾತ್ಕಾಲಿಕ ಔಷಧಿಗಳಿಗೆ ಸಂತೋಷವನ್ನು ನೀಡಬಹುದು. ಆದರೆ, ಯುವಕರು ಅವರ ಜೀವನ ಮತ್ತು ಕುಟುಂಬದ ಭವಿಷ್ಯವನ್ನು ಹಾಳು ಮಾಡುತ್ತಾರೆ. ಈ ವಾಕಥಾನ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸುತ್ತಿರುವುದು ಸಂತಸದ ಸಂಗತಿ. ‘ನಗರದಲ್ಲಿ ಮಾದಕ ಪದಾರ್ಥ ಮಾರಾಟ ದಂಧೆಯಲ್ಲಿ ನಿರತರಾಗಿರುವವರನ್ನು ಪತ್ತೆಹಚ್ಚಿ ಮಟ್ಟ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
ವಾಕಥಾನ್ ಪ್ರಚಾರಾರ್ಥ ಕಮಿಷನರ್ ಹಾಗೂ ಡಿಸಿಪಿ ಅವರ ಭಾವಚಿತ್ರ ಇರುವ ಫ್ಲೆಕ್ಸ್ಗಳನ್ನು ನಗರದ ಪ್ರಮುಖ ಜಂಕ್ಷನ್ಗಳ ಬಳಿ ಅಳವಡಿಸಲಾಗಿತ್ತು. ಮಾದಕ ದ್ರವ್ಯ ಹಾವಳಿ ತಡೆಗೆ ಮಂಗಳೂರು ನಗರ ಪೊಲೀಸರಿಂದ ಇದೊಂದು ಅಪೂರ್ವ ಪ್ರಯತ್ನ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.ಮಾದಕ ದ್ರವ್ಯಗಳ ಹಾವಳಿಯ ವಿರುದ್ಧ ಜಾಗೃತಿ ಅತೀ ಅವಶ್ಯವಾಗಿದೆ, ಈ ಪಿಡುಗನ್ನು ಬೇರುಸಹಿತ ಹತ್ತಿಕ್ಕಬೇಕು.
ಇದೇ ವೇಳೆ ಕಿರು ವೀಡಿಯೋ ಸ್ಪರ್ಧೆ ಹಾಗೂ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಸುಧೀರ್ ಶೆಟ್ಡಿ ಕಣ್ಣೂರು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ಅನಿಲ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post