ಮಂಗಳೂರು: ನಗರದ ಸೇಂಟ್ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಸೋಮವಾರ ಲಿಖಿತ ಹಾಗೂ ವಿಡಿಯೋ ರೆಕಾರ್ಡಿಂಗ್ ಮೂಲಕ ಹೇಳಿಕೆಗಳನ್ನು ದಾಖಲಿಸಿ ವಿಚಾರಣೆ ಆರಂಭಿಸಿದರು.
ಸಂಜೆ 3 ಗಂಟೆಯಿಂದ ಪೋಷಕರು ತಮ್ಮೊಂದಿಗೆ ಮಕ್ಕಳನ್ನು ಕರೆತಂದು ಅಧಿಕಾರಿ ಮುಂದೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಒಬ್ಬೊಬ್ಬರಾಗಿಯೇ ಪೋಷಕರು ಅಧಿಕಾರಿಗಳಿಗೆ ಮೌಖಿಕವಾಗಿ ಮಾಹಿತಿಗಳನ್ನು ನೀಡಿದ್ದಾರೆ. ಎಲ್ಲರ ಹೇಳಿಕೆಯನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ, ಅಧಿಕಾರಿಗಳು ವರದಿ ಮಾಡಿಕೊಂಡಿದ್ದಾರೆ. ಏಳು ಮತ್ತು ಆರನೇ ತರಗತಿಯ ಸುಮಾರು 30ರಷ್ಟು ಪೋಷಕರು ಆಗಮಿಸಿದ್ದರು. ಕೆಲವೊಬ್ಬರು ತಮ್ಮ ಮಕ್ಕಳನ್ನೂ ಜೊತೆಗೆ ಕರೆತಂದಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಪೋಷಕಿ ಜ್ಯೋತಿ ವಿವಾದ ಇಷ್ಟೊಂದು ಜಟಿಲವಾಗಲು ಸಿಸ್ಟರ್ ಪ್ರಭಾ ಅವರೇ ಕಾರಣ. ಮಕ್ಕಳು, ಪೋಷಕರು ಆರೋಪ ಮಾಡುತ್ತಿದ್ದರೂ, ಅವರು ಮುಂದೆ ಬಂದು ಮಾತನಾಡುತ್ತಿಲ್ಲ. ನಮ್ಮನ್ನು ಕರೆದಾದರೂ ಮಾತನಾಡಬಹುದಿತ್ತು. ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿದ್ದಾರೆ. ನಮ್ಮ ಎದುರು ಬಂದು ಶಾಲೆಯಲ್ಲೇ ಮಾತಾಡಬಹುದಿತ್ತಲ್ಲ. ಈ ವಿಚಾರ ಇಷ್ಟು ದೊಡ್ಡದು ಆಗುತ್ತಿರಲಿಲ್ಲ. ಈಗ ನಾವು ನಮ್ಮ ಕೆಲಸ ಬಿಟ್ಟು ಅಲೆದಾಡುವ ಸ್ಥಿತಿಯಾಗಿದೆ. ಆದರೆ ಅಂತಹ ಮನಸ್ಥಿತಿಯವರು ಯಾವ ಶಾಲೆಯಲ್ಲೂ ಶಿಕ್ಷಕಿಯಾಗಿ ಮುಂದುವರಿಯಬಾರದು ಎಂದರು.
ಜೆರೋಸಾ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಟಾರ್ಗೆಟ್ : ಹಿಂದೂ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಹಣೆಗೆ ಪ್ರಸಾದ, ಕೈಗೆ ಬಳೆ, ಕಾಲಿಗೆ ಗೆಜ್ಜೆ ಹಾಕುವಂತೆ ಇರಲಿಲ್ಲ. ಹಾಕಿದರೆ ಬೈಯುತ್ತಿದ್ದರು. ನಾನು ಏಳನೇ ತರಗತಿಯಲ್ಲಿರುವಾಗ ಇದೆಲ್ಲ ಹೇಳುತ್ತಿದ್ದರು. ಅವಾಗ ಸಮಾಜ ವಿಜ್ಞಾನ ವಿಷಯಕ್ಕೆ ಆ ಶಿಕ್ಷಕಿ ಇದ್ದರು. ಆ ಸಮಯದಲ್ಲಿ ನಾವು ಚಿಕ್ಕವರಿದ್ದೆವು. ಹೆಚ್ಚೇನು ಗೊತ್ತಾಗುತ್ತಿರಲಿಲ್ಲ. 10 ನೇ ತರಗತಿಯಲ್ಲಿದ್ದಾಗ ಪೋಷಕರ ಬಳಿ ಹೇಳಿದ್ದೆ. ಶಾಲೆಗೆ ಬಂದು ಮಾತನಾಡಿದ್ರೆ ಟಾರ್ಗೆಟ್ ಮಾಡುತ್ತಾರೆ ಅಂತಾ ಚರ್ಚಿಸರಿರಲಿಲ್ಲ. ಲಿಖಿತವಾಗಿ ಬರೆದುಕೊಟ್ಟಿದ್ದೇನೆ. ಹತ್ತನೇ ತರಗತಿ ಅಂಕಪಟ್ಟಿಯನ್ನು ದಾಖಲೆಯಾಗಿ ನೀಡಿದ್ದೇನೆ ಎಂದರು.
ವಿಚಾರಣೆ ಬಳಿಕ ಅಧಿಕಾರಿ ಆಕಾಶ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ‘ಈ ಪ್ರಕರಣದ ಸತ್ಯಶೋಧನೆ ಪ್ರಕ್ರಿಯೆಯನ್ನು ಆರಂಭಿಸಿದ್ದೇನೆ. ಬೆಳಿಗ್ಗೆ 10ರಿಂದ ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದೇನೆ. ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿದೆ. ಈ ಹಂತದಲ್ಲಿ ವಿಚಾರಣೆ ಕುರಿತು ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ತನಿಖೆಗೆ ಎಲ್ಲರೂ ಸಂಪೂರ್ಣ ಸಹಕಾರ ಕೊಡಬೇಕು’ ಎಂದರು. ‘ಎರಡು ದಿನಗಳು ಇಲ್ಲೇ ಇದ್ದು, ವಿಚಾರಣೆ ಪೂರ್ಣಗೊಳಿಸಿ ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿ ವಸ್ತುನಿಷ್ಠ ವರದಿ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post