ಉಳ್ಳಾಲ: ಸೋಮೇಶ್ವರ ಉಚ್ಚಿಲದ ನಾಗತೋಟದಲ್ಲಿನ ಖಾಸಗಿ ಜಾಗದ ಮರಳು ಅಡ್ಡೆಗೆ ಸಿಸಿಬಿ ಪೊಲೀಸರು, ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ದಾಸ್ತಾನಿರಿಸಿದ್ದ ಮರಳು ಮತ್ತು ಹೊಳೆಯಲ್ಲಿ ಮರಳು ಸಾಗಾಟ ನಡೆಸುತ್ತಿದ್ದ ನಾಲ್ಕು ನಾಡದೋಣಿಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಸಮುದ್ರ ತೀರದಿಂದ ನಿತ್ಯವೂ ಅಕ್ರಮವಾಗಿ ಮರಳು ತೆಗೆದು ನಾಡ ದೋಣಿಗಳ ಮೂಲಕ ಹೊಳೆಯಲ್ಲಿ ಸಾಗಾಟ ನಡೆಸಿ ನಾಗತೋಟ ನಿವಾಸಿ ಮಹಮ್ಮದ್ ಆಲಿ ಅವರ ಖಾಸಗಿ ಜಮೀನಿನಲ್ಲಿ ದಾಸ್ತಾನು ಇರಿಸಲಾಗುತ್ತಿತ್ತು.ಈ ಮರಳನ್ನು ಮಧ್ಯ ರಾತ್ರಿ ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿತ್ತು. ಈ ಮರಳು ಮಾಫಿಯಾ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸುಖೇಶ್ ಉಚ್ಚಿಲ್ ಮತ್ತು ರಂಜಿತ್ ಬಟ್ಟಪ್ಪಾಡಿ ಅವರು ಸ್ಥಳೀಯ ಪೊಲೀಸರಿಗೆ ಪದೇ ಪದೇ ದೂರು ನೀಡಿದ್ದರೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದ್ದಿರಲಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮರಳು ಅಡ್ಡೆಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಎಗ್ಗಿಲ್ಲದೆ ಮುಂದುವರೆದಿದ್ದ ಅಕ್ರಮ ಮರಳುಗಾರಿಕೆಯ ಬಗ್ಗೆ ಸುಖೇಶ್ ಮತ್ತು ರಂಜಿತ್ ಅವರು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೇ ಮಂಗಳವಾರ ಕರೆ ಮಾಡಿ ತಿಳಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಿಸಿಬಿ ಪೊಲೀಸರನ್ನೊಳಗೊಂಡ ತಂಡವು ಬುಧವಾರ ಬೆಳ್ಳಂಬೆಳಗ್ಗೆ ನಾಗತೋಟದ ಅಕ್ರಮ ಮರಳು ಅಡ್ಡೆಗೆ ದಿಢೀರ್ ದಾಳಿ ನಡೆಸಿದ್ದು ನಂತರ ಉಳ್ಳಾಲ ಪೊಲೀಸರಿಗೂ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳಾದ ಕುಂಜತ್ತೂರಿನ ಜಯರಾಮ್ ಶೆಟ್ಟಿ, ಇಬ್ರಾಹಿಂ ಕೋಟೆಪುರ, ವಿನೋದ್ ಉಚ್ಚಿಲ್ ಯಾನೆ ಹನಿ ಹಿಂದುಸ್ಥಾನಿ, ಚಂದ್ರ ಸೋಮೇಶ್ವರ ಮತ್ತು ಸುನಿಲ್ ತಲೆಮರೆಸಿಕೊಂಡಿದ್ದಾರೆ. ವಶ ಪಡಿಸಿಕೊಳ್ಳಲಾದ ಅಪಾರ ಪ್ರಮಾಣದ ಮರಳು ಮತ್ತು ನಾಡ ದೋಣಿಗಳನ್ನು ಪೊಲೀಸರು ಭೂ ಮತ್ತು ಗಣಿ ವಿಜ್ನಾನ ಇಲಾಖಾಧಿರಿಗಳಿಗೆ ಹಸ್ತಾಂತರಿಸಿದ್ದಾರೆ. ಅಕ್ರಮ ಮರಳನ್ನು ದಾಸ್ತಾನು ಇರಿಸಲು ಸಹಕರಿಸುತ್ತಿರುವವರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Discussion about this post