ಮಂಗಳೂರು : ವಂಚನೆ ಮಾಡಿದ್ದಾಗಿ ಆರೋಪ ಹೊತ್ತುಕೊಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ಯುವಕನೊಬ್ಬ ತನ್ನ ಜೀವವನ್ನೇ ಕೊನೆಗಾಣಿಸಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ವಾಮದಪದವು ತಿಮರಡ್ಕ ನಿವಾಸಿ ಪದ್ಮನಾಭ ಸಾಮಂತ ಟ್ರೋಲ್ ಆದವರಾಗಿದ್ದಾರೆ.
ಕಾಂಗ್ರೆಸ್ ಮುಖಂಡನಿಂದ ಲಕ್ಷಾಂತರ ವಂಚನೆ… ಕೆಲಸ ಕೊಡಿಸುವ ನೆಪದಲ್ಲಿ ಕಾಂಗ್ರೆಸ್ ನಾಯಕನಿಂದ ವಂಚನೆ ಎಂಬಿತ್ಯಾದಿ ಶೀರ್ಷಿಕೆಯಲ್ಲಿ ಸುದ್ದಿ ಹರಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಚುನಾವಣೆಯಾಗಿದ್ದ ಕಾರಣ ಇದನ್ನೇ ಎನ್ಕ್ಯಾಶ್ ಮಾಡಲು ರಾಜಕೀಯ ಚರ್ಚೆಯಾಗಿಯೂ ಈ ವಿಚಾರ ಬಳಕೆಯಾಗಿತ್ತು. ಆದ್ರೆ ಈ ಎಲ್ಲಾ ಚರ್ಚೆಗೆ ಆರೋಪಿತ ಪದ್ಮನಾಭ ತಿಲಾಂಜಲಿ ಇಟ್ಟು ಇಹಲೋಕ ಬಿಟ್ಟು ಹೋಗಿದ್ದಾರೆ.
ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ, ವಾಮದಪದವು ನಿವಾಸಿ ಪದ್ಮನಾಭ ಸಾಮಂತ (30) ಮೃತ ಯುವಕ. ಸರಕಾರಿ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿ ಪದ್ಮನಾಭ ಸಾಮಂತ ಯುವಕನೊಬ್ಬನಲ್ಲಿ 1.5 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ಪದ್ಮನಾಭನನ್ನು ಕರೆ ಮಾಡಿ, ವಿಚಾರಣೆಗೆ ಬರುವಂತೆ ತಿಳಿಸಿದ್ದರು.
ಎರಡು ದಿನಗಳಿಂದ ಯಾರಿಗೂ ಸಿಗದೇ, ಫೋನನ್ನೂ ಸ್ವೀಕರಿಸದೇ ಇದ್ದ ಪದ್ಮನಾಭನ ಬಗ್ಗೆ ಹುಡುಕಾಟ ನಡೆಸಲಾಗಿತ್ತು. ಭಾನುವಾರ ಬೆಳಗ್ಗೆ ಆತನ ಮನೆಯಿದ್ದ ಪಕ್ಕದ ಗುಡ್ಡದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಪದ್ಮನಾಭ ಆತ್ಮಹತ್ಯೆ ಮಾಡಿಕೊಂಡ ರೀತಿಯಿದೆ. ಎರಡು ದಿನಗಳ ಹಿಂದೆಯೇ ಮೃತಪಟ್ಟಿದ್ದು, ಶವ ಕೊಳೆತಿದೆ ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ಪೋಸ್ಟ್ ಮಾರ್ಟಂ ನಡೆಸಲು ವೈದ್ಯರಿಗೆ ಒಪ್ಪಿಸಿದ್ದಾರೆ. ಸ್ಥಳೀಯರು ಕೊಲೆಗೈದ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದಾರೆ.
ಪದ್ಮನಾಭ ಸಾಮಂತ ಅವರು ಫೇಸ್ಬುಕ್ ಜಾಲತಾಣದಲ್ಲಿ ತುಂಬ ಏಕ್ಟಿವ್ ಆಗಿದ್ದರು. ಬಿಜೆಪಿ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಹೀಗಾಗಿ ಪದ್ಮನಾಭ ಸಾವಿನ ಬಗ್ಗೆ ಶಂಕಿಸಿ ಕಾಂಗ್ರೆಸ್ ಕಾರ್ಯಕರ್ತರು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post