ಮಂಗಳೂರು, ಮೇ.14: ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳನ್ನು ರಾಷ್ಟ್ರೀಯ ಪಕ್ಷಗಳು ಸಂಪೂರ್ಣ ಕಡೆಗಣಿಸಿವೆ. ಅಭ್ಯರ್ಥಿ ಆಯ್ಕೆಯಲ್ಲಿ ಈ ಭಾಗದವರಿಗೆ ಪ್ರಾತಿನಿಧ್ಯ ನೀಡದೆ ನಿರ್ಲಕ್ಷ್ಯ ಮಾಡಿವೆ. ಹೀಗಾಗಿ ಕರಾವಳಿ ಭಾಗದ ಶಿಕ್ಷಕರ ಧ್ವನಿಯಾಗಲು ಬಯಸುತ್ತೇನೆ. ಶಿಕ್ಷಕರ ಸ್ವಾಭಿಮಾನದ ಪ್ರತೀಕವಾಗಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಮಂಗಳೂರು ವಿ.ವಿ. ಮಾಜಿ ಸಿಂಡಿಕೇಟ್ ಸದಸ್ಯ, ಸಹಕಾರ ಭಾರತಿ ಮುಖಂಡ ಎಸ್.ಆರ್. ಹರೀಶ್ ಆಚಾರ್ಯ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು ತಮ್ಮ ವೃತ್ತಿ ಸಂಬಂಧವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳನ್ನು ಸರಕಾರದ ಮುಂದಿಡಲು, ಶಿಕ್ಷಕರ ಪರವಾಗಿ ಪರಿಷತ್ತಿನಲ್ಲಿ ಧ್ವನಿಯೆತ್ತಲು ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಮೇ 15ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.
ಈ ಚುನಾವಣೆಯಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ಸಮುದಾಯದ ಮಹತ್ವ ಹಾಗೂ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ ಎಂದ ಆವರು, ಜನಪ್ರತಿನಿಧಿಗಳು ನಮ್ಮ ಕೈಗೆಟಕುವಂತಿದ್ದು, ಜ್ವಲಂತ ಸಮಸ್ಯೆಗಳ ಧ್ವನಿಯಾಗು ವಂತಿರಬೇಕು. ಈ ಬಾರಿ ಬದಲಾವಣೆಯ ಕೂಗು ಕೇಳಿ ಬರುತ್ತಿದೆ. ಸುಮಾರು 20 ವರ್ಷಗಳಿಂದ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕ ಸಮುದಾಯದ ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಡಿದ್ದೇನೆ. ಈ ಮೂಲಕ ಶಿಕ್ಷಕ ಸಮುದಾಯಕ್ಕೆ ಸೂಕ್ತ ನಾಯಕತ್ವವನ್ನು ನೀಡುವ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು. ಡಾ| ರಾಜಮೋಹನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post