ಮಂಗಳೂರು, ಮೇ.16: ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ/ಮಾರಾಟ ಮಾಡುತ್ತಿದ್ದವನನ್ನು ಪತ್ತೆಹಚ್ಚಿ 270 ಗ್ರಾಂ ಡ್ರಗ್ಸ್ ವಶಪಡಿಸಿ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಅನ್ನು ಕಾರಿನಲ್ಲಿ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದೇರಳಕಟ್ಟೆ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ್ದಾರೆ. ಬಿಜೈ ನ್ಯೂರೋಡ್ ನಿವಾಸಿ ಮೊಹಮ್ಮದ್ ಅಮೀನ್ ರಾಫಿ(23), ಅಡ್ಡೂರು ನಿವಾಸಿ ಮೊಹಮ್ಮದ್ ಸಿನಾನ್ ಅಬ್ದುಲ್ಲಾ(23), ಬಂದರು ನಿವಾಸಿ ಮೊಹಮ್ಮದ್ ನೌಮಾನ್(22), ಬೋಳಿಯಾರ್ ನಿವಾಸಿ ಮೊಹಮ್ಮದ್ ಸಫೀಲ್(23) ಬಂಧಿತರು.
ಆರೋಪಿಗಳಿಂದ 6,50,000 ರೂ. ಮೌಲ್ಯದ 270 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 4 ಮೊಬೈಲ್ ಫೋನ್ ಗಳು, ಟೊಯೊಟಾ ಕೊರೊಲ್ಲಾ ಕಾರು, ಡಿಜಿಟಲ್ ತೂಕ ಮಾಪಕವನ್ನು ಸ್ವಾಧೀನಪಡಿಸಲಾಗಿದೆ. ವಶಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ.14,85,500 ಆಗಬಹುದು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್ಎಂ, ಎಸ್ಸೈಗಳಾದ ಶರಣಪ್ಪಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿ ವರ್ಗವು ಪಾಲ್ಗೊಂಡಿತ್ತು.
Discussion about this post