ನವದೆಹಲಿ: ಅಧಿಕಾರ ದುರ್ಬಳಕೆ, ನಕಲಿ ದಾಖಲೆ ನೀಡಿದ ಆರೋಪದ ಮೇಲೆ ಅಮಾನತಾಗಿದ್ದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಕೇಂದ್ರ ಸರ್ಕಾರ ಹುದ್ದೆಯಿಂದಲೇ ಬಿಡುಗಡೆ ಮಾಡಿದೆ. 1954 ರ ಐಎಎಸ್ (ಪ್ರೊಬೇಷನ್) ನಿಯಮಗಳ ಅಡಿಯಲ್ಲಿ ವಜಾಗೊಳಿಸಿ ಶನಿವಾರ ಆದೇಶ ಹೊರಡಿಸಿದೆ. ಮಹಾರಾಷ್ಟ್ರ ಖೇಡರ್ನ ಅಧಿಕಾರಿಯಾಗಿದ್ದ ಪೂಜಾ ಮನೋರಮಾ ಖೇಡ್ಕರ್ ಅವರನ್ನು ಸೆಪ್ಟೆಂಬರ್ 6 ರಿಂದ ಅನ್ವಯವಾಗುವಂತೆ ಐಎಎಸ್ ಪ್ರೊಬೇಷನರಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಪೂಜಾ ವಿರುದ್ಧದ ಆರೋಪವೇನು?: ತರಬೇತಿ ನಿರತ ಐಎಎಸ್ ಅಧಿಕಾರಿಯಾಗಿದ್ದಾಗ ಪೂಜಾ ಖೇಡ್ಕರ್, ತಮ್ಮ ವೈಯಕ್ತಿಕ ಕಾರಿನ ಮೇಲೆ ‘ಮಹಾರಾಷ್ಟ್ರ ಸರ್ಕಾರ’ ಎಂದು ಅನಧಿಕೃತವಾಗಿ ಬರೆದುಕೊಂಡಿದ್ದಲ್ಲದೇ, ಕೆಂಪು ದ್ವೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಅಧಿಕಾರಿಯೊಬ್ಬರ ಕಚೇರಿಯನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಕಚೇರಿಗೆ ದುಬಾರಿ ವಸ್ತುಗಳನ್ನು ಸರ್ಕಾರದ ಖರ್ಚಿನಲ್ಲಿ ಖರೀದಿಸಿ ಅಳವಡಿಸಿದ್ದರು. ಇದಾದ ಬಳಿಕ ಅವರು ತಮ್ಮ ಗುರುತನ್ನು ಬದಲಿಸಿ ನಿಗದಿತ ಮಿತಿಯನ್ನು ಮೀರಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದರು. ಜೊತೆಗೆ, ನೇಮಕಾತಿ ವೇಳೆ ನಕಲಿ ದಾಖಲೆ ನೀಡಿದ್ದಾರೆ ಎಂಬ ಆರೋಪವಿದೆ.
ಹುದ್ದೆಗಾಗಿ ಪೂಜಾ ಅವರು, ಇತರ ಹಿಂದುಳಿದ ವರ್ಗಗಳು (OBC) ಮತ್ತು ಅಂಗವಿಕಲ ಕೋಟಾದ ಮೀಸಲಾತಿ ದುರ್ಬಳಕೆ ಮಾಡಿಕೊಂಡಿದ್ದಾರೆ. ತಾವು ಅಂಗವಿಕಲೆ ಎಂದು ನಕಲಿ ದಾಖಲೆ ನೀಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಆದರೆ, ಈ ಎಲ್ಲ ಆರೋಪಗಳನ್ನು ನಿರಾಕರಿಸಿರು ಪೂಜಾ ಅವರು, ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಕೋರ್ಟ್ನಲ್ಲಿ ಅರ್ಜಿ ವಿಚಾರಣೆಯಲ್ಲಿದೆ.
ಇತ್ತ, ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಜುಲೈ 31 ರಂದು ಪೂಜಾ ಖೇಡ್ಕರ್ ಅವರನ್ನು ಪ್ರೊಬೇಷನರಿ ಹುದ್ದೆಯಿಂದ ಅಮಾನತು ಮಾಡಿತ್ತು. ಜೊತೆಗೆ ಮುಂದಿನ ಎಲ್ಲ ಪರೀಕ್ಷೆಗಳಿಗೆ ನಿಷೇಧ ಹೇರಿತ್ತು. ರೈತರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಆಕೆಯ (ಪೂಜಾ) ತಾಯಿಯ ಮೇಲೂ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post