ನವದೆಹಲಿ: ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡಿದೆ. ‘ಎಕ್ಸೈಸ್ ಸುಂಕ ಕಡಿತದಿಂದಾಗಿ ಪೆಟ್ರೋಲ್ ಮಾರಾಟ ದರವು ಲೀಟರಿಗೆ ₹9.5 ಮತ್ತು ಡೀಸೆಲ್ ದರವು ಲೀಟರಿಗೆ ₹7ರಷ್ಟು ಕಡಿಮೆ ಆಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಿಳಿಸಿದ್ದಾರೆ. ‘ಈ ನಿರ್ಧಾರದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ ₹1 ಲಕ್ಷ ಕೋಟಿ ವರಮಾನ ನಷ್ಟ ಆಗುವ ಅಂದಾಜು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ. ಶನಿವಾರದ ಕಡಿತದಿಂದಾಗಿ ಎಕ್ಸೈಸ್ ಸುಂಕ ಲೀಟರ್ ಪೆಟ್ರೋಲ್ಗೆ ₹ 19.9 ಮತ್ತು ಡೀಸೆಲ್ಗೆ ₹ 15.8ಕ್ಕೆ ಇಳಿಕೆ ಆಗಿದೆ.
‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ದೇಶದಲ್ಲಿ ಇಂಧನ ದರ ಹೆಚ್ಚಾಗುವುದನ್ನು ತಪ್ಪಿಸಲು ಎಕ್ಸೈಸ್ ಸುಂಕದಲ್ಲಿ ಕಡಿತ ಮಾಡಲಾಗಿದೆ’ ಎಂದು ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಾರ್ಚ್ 22ರಿಂದ ಏಪ್ರಿಲ್ 6ರವರೆಗಿನ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರವನ್ನು ಪ್ರತಿ ಲೀಟರಿಗೆ ₹10 ಏರಿಕೆ ಮಾಡಿದೆ.
‘ಎಲ್ಲಾ ರಾಜ್ಯ ಸರ್ಕಾರಗಳೂ ಅದರಲ್ಲಿಯೂ ವಿಶೇಷವಾಗಿ 2021ರ ನವೆಂಬರ್ನಲ್ಲಿ ತೆರಿಗೆ ಕಡಿತವನ್ನು ಮಾಡದ ರಾಜ್ಯಗಳು, ಕೇಂದ್ರ ಸರ್ಕಾರದ ರೀತಿಯಲ್ಲಿಯೇ ತೆರಿಗೆ ಕಡಿತ ಮಾಡಿ, ಸಾಮಾನ್ಯ ಜನರಿಗೆ ಬೆಲೆ ಏರಿಕೆಯಿಂದ ತುಸು ನೆಮ್ಮದಿ ನೀಡುವಂತೆ ನಾನು ಒತ್ತಾಯಿಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಕೇರಳ ರಾಜ್ಯವು ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಲೀಟರಿಗೆ ₹ 2.41 ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ₹ 1.36 ಇಳಿಕೆ ಮಾಡಿದೆ.
Discover more from Coastal Times Kannada
Subscribe to get the latest posts sent to your email.
Discussion about this post