ಕಲಬುರಗಿ, ಮಾ 01: ಸಂಸದ ಡಾ. ಉಮೇಶ್ ಜಾಧವ್ ಆಪ್ತ ಹಾಗೂ ಬಿಜೆಪಿ ಮುಖಂಡನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ. ಗಿರೀಶ್ ಚಕ್ರ ಕೊಲೆಯಾದ ಬಿಜೆಪಿ ಮುಖಂಡ ಎಂದು ಗುರುತಿಸಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಗಿರೀಶ್ ಚಕ್ರ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗಿರೀಶ್ ಅವರನ್ನು ಕಳೆದ ನಾಲ್ಕು ದಿನಗಳ ಹಿಂದೆ ಕಲಬುರಗಿ ಬಿಎಸ್ಎನ್ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ಸಂಸದ ಉಮೇಶ್ ಜಾಧವ್ ಆಯ್ಕೆ ಮಾಡಿದ್ದರು. ಸಲಹಾ ಸಮಿತಿ ನಿರ್ದೇಶಕ ನೇಮಕ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವ ನೆಪದಲ್ಲಿ ಗಿರೀಶ್ ಚಕ್ರ ಅವರನ್ನು ಸಾಗನೂರ ಗ್ರಾಮದ ಜಮೀನಿಗೆ ಕರೆಸಲಾಗಿದೆ. ಪರಿಚಿತರ ಕರೆ ಮೇರೆಗೆ ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ ಜಮೀನಲ್ಲಿ ರಕ್ತದ ಮಡುವಿನಲ್ಲಿ ಗಿರೀಶ್ ಚಕ್ರ ಮೃತದೇಹ ಪತ್ತೆಯಾಗಿದೆ.
ಇನ್ನು ಈ ದುರ್ಘಟನೆ ಬಗ್ಗೆ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿದ್ದು, ‘ಗಿರೀಶ್ ಚಕ್ರ ಕೊಲೆ ವಿಚಾರ ತಿಳಿದು ನನಗೆ ಆಘಾತ ಉಂಟಾಗಿದೆ. ಗಿರೀಶ್ ಚಕ್ರ ಉತ್ತಮ ಕೆಲಸಗಾರ. ಹೀಗಾಗಿ ಬಿಎಸ್ಎನ್ಎಲ್ ಸಲಹಾ ಸಮಿತಿ ನಿರ್ದೇಶಕನಾಗಿದ್ದ. ನನ್ನ ಕಟ್ಟಾ ಬೆಂಬಲಿಗನಾಗಿದ್ದ. ಆತನ ಕೊಲೆ ವಿಚಾರ ತಿಳಿದು ತುಂಬಾ ನೋವಾಗಿದೆ. ಆರೋಪಿಗಳನ್ನು ಬಂಧಿಸಿ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಗಿರೀಶ್ ಚಕ್ರ ಕೊಲೆ ಸಂಬಂಧ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಿಗಾಗಿ ಶೋಧ ಪ್ರಾರಂಭವಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post