ಮುಂಬೈ: ದುರ್ಬಲ ಜಾಗತಿಕ ಪ್ರವೃತ್ತಿಗಳು ಮತ್ತು ವ್ಯಾಪಾರ ಉದ್ವಿಗ್ನತೆಗಳು ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರಿದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ ತೀವ್ರ ಕುಸಿತಕ್ಕೆ ಸಾಕ್ಷಿಯಾಯಿತು. ದೇಶದ ಎರಡೂ ಬೆಂಚ್ ಮಾರ್ಕ್ ಸೂಚ್ಯಂಕಗಳು ಭಾರಿ ನಷ್ಟದೊಂದಿಗೆ ದಿನವನ್ನು ಕೊನೆಗೊಳಿಸಿದವು.
ಸೆನ್ಸೆಕ್ಸ್ 1,414 ಪಾಯಿಂಟ್ ಅಥವಾ ಶೇಕಡಾ 1.9 ರಷ್ಟು ಕುಸಿದು 73,198 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ವಾರದಲ್ಲಿ 2,113 ಪಾಯಿಂಟ್ಗಳು ಅಥವಾ ಶೇಕಡಾ 2.8 ರಷ್ಟು ಕಳೆದುಕೊಂಡಿದೆ. ಇನ್ನು ಒಟ್ಟಾರೆಯಾಗಿ ಫೆಬ್ರವರಿಯಲ್ಲಿ ಸೆನ್ಸೆಕ್ಸ್ 4,303 ಪಾಯಿಂಟ್ಗಳು ಅಥವಾ ಶೇಕಡಾ 5.6 ರಷ್ಟು ಕುಸಿದಿದೆ. ಸೆನ್ಸೆಕ್ಸ್ ಈಗ ತನ್ನ ಸಾರ್ವಕಾಲಿಕ ಗರಿಷ್ಠ 85,978 ರ ಮಟ್ಟದಿಂದ ಸುಮಾರು ಶೇಕಡಾ 15 ರಷ್ಟು ಕುಸಿದಿದೆ.
ನಿಫ್ಟಿ 50 ಸೂಚ್ಯಂಕವು 420 ಪಾಯಿಂಟ್ ಅಥವಾ ಶೇಕಡಾ 1.86 ರಷ್ಟು ಕುಸಿದು 22,125 ಕ್ಕೆ ತಲುಪಿದೆ. ಇಂಟ್ರಾ-ಡೇ ಸೆಷನ್ನಲ್ಲಿ ನಿಫ್ಟಿ 22,105 ರ ಕನಿಷ್ಠ ಮಟ್ಟ ತಲುಪಿತ್ತು. ನಿಫ್ಟಿ ಫೆಬ್ರವರಿಯಲ್ಲಿ ಶೇಕಡಾ 5.9 ರಷ್ಟು ಅಂಕಗಳನ್ನು ಕಳೆದುಕೊಂಡಿದೆ ಮತ್ತು ಈಗ ಅದು ತನ್ನ ದಾಖಲೆಯ ಗರಿಷ್ಠ 26,277ರ ಮಟ್ಟದಿಂದ ಸುಮಾರು ಶೇಕಡಾ 16 ರಷ್ಟು ಕುಸಿದಿದೆ.
ದೇಶೀಯ ಬೆಂಚ್ ಮಾರ್ಕ್ ಸೂಚ್ಯಂಕಗಳು ಇಂಟ್ರಾ-ಡೇ ಸೆಷನ್ ಅನ್ನು ಕೆಳಮಟ್ಟದಲ್ಲಿ ಕೊನೆಗೊಳಿಸುತ್ತಿದ್ದಂತೆ, ಇಂಡಸ್ಇಂಡ್ ಬ್ಯಾಂಕ್ ಶೇಕಡಾ 7 ರಷ್ಟು ಕುಸಿದು ಅಗ್ರ ನಷ್ಟ ಅನುಭವಿಸಿತು. ಟೆಕ್ ಮಹೀಂದ್ರಾ, ಮಹೀಂದ್ರಾ & ಮಹೀಂದ್ರಾ, ಭಾರ್ತಿ ಏರ್ ಟೆಲ್, ಟಾಟಾ ಮೋಟಾರ್ಸ್, ಟೈಟಾನ್, ಇನ್ಫೋಸಿಸ್ ಮತ್ತು ನೆಸ್ಲೆ ಇಂಡಿಯಾ ಶೇಕಡಾ 4 ರಿಂದ 6 ರಷ್ಟು ಕುಸಿದವು.
ಸೆನ್ಸೆಕ್ಸ್ನ 30 ಷೇರುಗಳ ಪೈಕಿ 27 ಷೇರುಗಳು ಶೇಕಡಾ 1 ಕ್ಕಿಂತ ಹೆಚ್ಚು ನಷ್ಟ ದಾಖಲಿಸಿದರೆ, ಎಚ್ಡಿಎಫ್ಸಿ ಬ್ಯಾಂಕ್ ಮಾತ್ರ ಶೇಕಡಾ 2 ರಷ್ಟು ಏರಿಕೆಯಾಗಿದೆ. ಎಲ್ಲಾ ವಲಯ ಸೂಚ್ಯಂಕಗಳು ಶೇಕಡಾ 1 ಕ್ಕಿಂತ ಹೆಚ್ಚಿನ ನಷ್ಟದೊಂದಿಗೆ ಕೊನೆಗೊಂಡವು. ಐಟಿ ಮತ್ತು ಆಟೋ ಷೇರುಗಳು ತಲಾ ಶೇಕಡಾ 4 ರಷ್ಟು ಕುಸಿದವು. ಎಫ್ ಎಂಸಿಜಿ, ಹೆಲ್ತ್ ಕೇರ್, ಕ್ಯಾಪಿಟಲ್ ಗೂಡ್ಸ್, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ತೈಲ ಮತ್ತು ಅನಿಲ ಸೇರಿದಂತೆ ಇತರ ವಲಯಗಳು ಸಹ ಶೇಕಡಾ 2 ಕ್ಕಿಂತ ಹೆಚ್ಚು ನಷ್ಟವನ್ನು ದಾಖಲಿಸಿವೆ.
ವಹಿವಾಟಿಗೆ ಒಳಪಟ್ಟ 4,081 ಷೇರುಗಳ ಪೈಕಿ 3,248 ಷೇರುಗಳು ನಷ್ಟದಲ್ಲಿ ಕೊನೆಗೊಂಡರೆ, 742 ಷೇರುಗಳು ಮಾತ್ರ ಲಾಭ ಗಳಿಸುವಲ್ಲಿ ಯಶಸ್ವಿಯಾದವು. ಸುಮಾರು 476 ಷೇರುಗಳು ತಮ್ಮ ಲೋವರ್ ಸರ್ಕ್ಯೂಟ್ ಮಿತಿಯನ್ನು ತಲುಪಿದರೆ, 106 ಷೇರುಗಳು ತಮ್ಮ ಗರಿಷ್ಠ ಮಿತಿಯನ್ನು ಮುಟ್ಟಿದವು.
ಇಂದಿನ ವಹಿವಾಟಿನಿಂದ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಬರೋಬ್ಬರಿ 93.65 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 27 ರಂದು ದಾಖಲಾಗಿದ್ದ 85,978.25 ಪಾಯಿಂಟ್ ದಾಖಲೆಯ ಗರಿಷ್ಠ ಮಟ್ಟದಿಂದ, ಬಿಎಸ್ಇ ಸೂಚ್ಯಂಕ ಬರೋಬ್ಬರಿ 12,780.15 ಪಾಯಿಂಟ್ ಗಳು ಅಥವಾ ಶೇ.14.86 ಪ್ರತಿಶತ ಕುಸಿದಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ, ಮೆಕ್ಸಿಕೋ ಮತ್ತು ಚೀನಾ ಉತ್ಪನ್ನಗಳ ಮೇಲೆ ಆಮದು ಸುಂಕ ದಿಢೀರ್ ಏರಿಕೆ ಮಾಡಿದ್ದರಿಂದ ಅಮೆರಿಕಾದ ಷೇರು ಮಾರುಕಟ್ಟೆ ತಲ್ಲಣಿಸಿದೆ. ಒಂದು ದಿನ ಹಿಂದೆಯೇ ಅಮೆರಿಕದಲ್ಲಿ ಮಾರುಕಟ್ಟೆ ಕುಸಿತ ಕಂಡಿದ್ದು ಇದರ ಪರಿಣಾಮ ಭಾರತಕ್ಕೂ ತಟ್ಟಿದೆ ಎನ್ನಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post