ಮಂಗಳೂರು, ಮಾ.31 : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ(ಮೂಡಾ) ಉರ್ವಾ ಕಚೇರಿಯಲ್ಲಿ ಬ್ರೋಕರುಗಳ ಆಟಾಟೋಪ ಮಿತಿಮೀರಿದ್ದು ಮುಡಾ ಆಯುಕ್ತರನ್ನು ಬ್ಲಾಕ್ಮೇಲ್ ಮಾಡುವ ಹಂತಕ್ಕಿಳಿದಿದ್ದಾರೆ. ಇದರಿಂದ ನೊಂದ ಮುಡಾ ಆಯುಕ್ತರು ನೂರ್ ಝಹರಾ ಖಾನಂ ಅವರು ಇಬ್ಬರು ಬ್ರೋಕರ್ ಗಳ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಬ್ರೋಕರ್ ವಹಾಬ್ (45) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಬಿತ್ (25) ಎಂಬ ಇಬ್ಬರ ವಿರುದ್ಧ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಜನವರಿ 7ರಂದು ಮುಡಾ ಕಚೇರಿ ಒಳಕ್ಕೆ ನುಗ್ಗಿದ್ದ ಬ್ರೋಕರ್ ವ್ಯಕ್ತಿಯೊಬ್ಬ ಸಿಬಂದಿ ಇಲ್ಲದ ಸಂದರ್ಭದಲ್ಲಿ ಕಚೇರಿ ದಾಖಲೆಗಳನ್ನು ಪರಿಶೀಲಿಸಿ ಫೋಟೊ ನಕಲು ಮಾಡಿದ್ದ ಘಟನೆ ನಡೆದಿತ್ತು. ಇದರ ಸಿಸಿಟಿವಿ ವಿಡಿಯೋ ಹೊರ ಬಂದಿದ್ದರಿಂದ ಮುಡಾ ಕಚೇರಿಯ ಬ್ರೋಕರ್ ವ್ಯವಹಾರ ಜಗಜ್ಜಾಹೀರಾಗಿತ್ತು. ಆನಂತರ ಮೂಡಾ ಆಯುಕ್ತ ನೂರ್ ಝಹರಾ ಅವರು, ಸಿಬಂದಿ ಹೊರತುಪಡಿಸಿ ಇತರ ಯಾರು ಕೂಡ ಕಚೇರಿ ಒಳ ಬರುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದರು.
ಇದರಿಂದ ಕಸಿವಿಸಿಗೊಳಗಾದ ಬ್ರೋಕರ್ ಗಳು ಮುಡಾ ಆಯುಕ್ತರ ವಿರುದ್ಧ ಇತರ ಬ್ರೋಕರುಗಳನ್ನು ಒಟ್ಟುಗೂಡಿಸಿ ವಾಟ್ಸಪ್ ಗ್ರೂಪ್ ರಚಿಸಿ ಮಹಿಳಾ ಕಮಿಷನರ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿಕೊಂಡಿದ್ದರು. ಅಧಿಕಾರಿ ಬಗ್ಗೆ ಅವಮಾನಕರ ಸಂದೇಶಗಳನ್ನು ಪೋಸ್ಟ್ ಮಾಡುವುದು, ಗುಂಪು ಕೂಡಿಕೊಂಡು ಕಚೇರಿ ಒಳಗೆ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಫೋನ್ ಮೂಲಕ ಜೀವ ಬೆದರಿಕೆ ಒಡ್ಡುವುದು ಮಾಡುತ್ತಿದ್ದರು.
ಅಲ್ಲದೆ, ಸಾರ್ವಜನಿಕರ ಮುಂದೆ ಕಮಿಷನರ್ ಅವರನ್ನು ಅವಮಾನಿಸುವುದು, ಜನರನ್ನು ಸೇರಿಸಿ ಶಾಂತಿ ಕದಡಲು ಯತ್ನಿಸಿದ್ದಲ್ಲದೆ, ವಾಮಾಚಾರ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಮುಡಾ ಆಯುಕ್ತರು ನೂರ್ ಝಹರಾ ದೂರಿನಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post