ಕಡಬ, ಜೂ 1 : ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಪವರ್ ಮ್ಯಾನ್ ಗೆ ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡ ಹಾಗೂ ಚಿಕಿತ್ಸೆಗೆಂದು ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ವಾಹನದಲ್ಲೆ ಕೊನೆಯುಸಿರೆಳೆದ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಎಂಬಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಮೃತಪಟ್ಟ ಪವರ್ ಮ್ಯಾನ್ . ಅವರು ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದ್ದಾಗ ಅವಘಡ ಸಂಭವಿಸಿದೆ. ತಲೆಕ್ಕಿ ಬಳಿ ಮುಳಿಮಜಲು ಎಂಬಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಿತ್ತು. ಇದರ ದುರಸ್ತಿಗೆಂದು ದ್ಯಾಮಣ್ಣರವರು ಕಂಬ ಏರಿದ್ದರು.ಈ ವೇಳೆ ಹಠಾತ್ ವಿದ್ಯುತ್ ಶಾಕ್ ಹೊಡೆದಿದೆ.
ವಿದ್ಯುತ್ ಶಾಕ್ ಹೊಡೆದ ಹಿನ್ನಲೆ ದ್ಯಾಮಣ್ಣ ಅವರು ಕೆಲ ಕಾಲ ಕಂಬದಲ್ಲೆ ಉಳಿದಿದ್ದರು ಎನ್ನಲಾಗಿದೆ. ಬಳಿಕ ಸ್ಥಳೀಯರು ಮರದ ಕೋಲಿನ ಸಹಾಯದಿಂದ ಅವರನ್ನು ಕೆಳಗಿಳಿಸಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post