ಮಂಗಳೂರು, ಜುಲೈ 1: ಮಂಗಳೂರು ಕಾರಾಗೃಹದಲ್ಲಿ ಎರಡು ಗಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕಾರಾಗೃಹದ ಎ ಬ್ಯಾರಕ್‌ನಲ್ಲಿ ವಿಚಾರಣಾಧೀನ ಕೈದಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರಿಗೆ ಗಾಯಗಳಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ನಡೆದಿದೆ. ಇತ್ತೀಚೆಗೆ ಬಂಧಿತರಾಗಿ ಜೈಲು ಪಾಲಾಗಿದ್ದ ಉಳ್ಳಾಲದ ಮಹಮ್ಮದ್ ಸಮೀರ್ ಅಲಿಯಾಸ್ ಕಡಪ್ಪರ ಸಮೀರ್ (33) ಮತ್ತು ಮಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್ ಹಲ್ಲೆಗೀಡಾದವರು. ಇನ್ನು ಹಲ್ಲೆ ಪ್ರಕರಣ ಸಂಬಂಧ ಏಳು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಕೊಡಿಯಾಲಬೈಲಿನ ಸಬ್ ಜೈಲಿನಲ್ಲಿ ಇಂದು ಸಂಜೆ 6.30ರಿಂದ 6.45ರ ನಡುವೆ ಹಲ್ಲೆ ಕೃತ್ಯ ನಡೆದಿದೆ. ಟೋಪಿ ನೌಫಾಲ್ ಎಂಬಾತನ ನೇತೃತ್ವದ ತಂಡದ ಸದಸ್ಯರು ಕಿಚನ್ ರೂಮಲ್ಲಿದ್ದ ಚಮಚ ಇನ್ನಿತರ ಹರಿತ ಸಾಮಗ್ರಿಗಳನ್ನು ಬಳಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು, ತಲೆ, ಭುಜ, ಮುಖದ ಮೇಲೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಜೈಲಿನ ಅಧಿಕಾರಿಗಳು ಅವರಿಬ್ಬರನ್ನು ರಕ್ಷಣೆ ಮಾಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಹಲ್ಲೆಗೀಡಾದ ಮಹಮ್ಮದ್ ಸಮೀರ್ ಮತ್ತು ಮನ್ಸೂರ್ ಉಳ್ಳಾಲ ಠಾಣೆಯಲ್ಲಿ ನಟೋರಿಯಸ್ ರೌಡಿಗಳಾಗಿದ್ದು ದರೋಡೆ, ಟಾರ್ಗೆಟ್ ಇಲ್ಯಾಸ್ ಕೊಲೆ, ಫಳ್ನೀರ್ ಶಾಪ್ ಶೂಟೌಟ್ ಪ್ರಕರಣ ಸೇರಿದಂತೆ ಹಲವು ಕೇಸುಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ದರೋಡೆ ಸಂಚು ಪ್ರಕರಣದಲ್ಲಿ ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು.
ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ, ಮುಫದ್ ರಿಫಾತ್ (28), ಮುಹಮ್ಮದ್ ರಿಜ್ವಾನ್ (34), ಇಬ್ರಾಹಿಂ ಕಲ್ಲೆಲ್ (30), ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್, ಜೈನುದ್ದೀನ್ ಮತ್ತಿತರರು ಸೇರಿಕೊಂಡು ಜೈಲಿನಲ್ಲಿ ಹಳೆ ದ್ವೇಷದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇವರ ನಡುವೆ ಪೂರ್ವ ದ್ವೇಷ ಏನಿತ್ತು ಅನ್ನೋದು ತಿಳಿದುಬಂದಿಲ್ಲ. ಮಹಮ್ಮದ್ ಸಮೀರ್ ಉಳ್ಳಾಲದ ನಟೋರಿಯಸ್ ರೌಡಿ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಆತನ ತಂಡದಲ್ಲಿದ್ದವರು ಹಲ್ಲೆ ನಡೆಸಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರಾಗೃಹದ ಅಧಿಕಾರಿಗಳ ದೂರಿನ ಮೇರೆಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post