ಬೀಜಿಂಗ್: ಕೊರೊನಾ ರೂಪಾಂತರ ತಳಿ ಡೆಲ್ಟಾ, ಚೀನಾದಲ್ಲಿ ತೀವ್ರತರ ಆತಂಕ ತಂದೊಡ್ಡಿದೆ. ಸದ್ಯ, ದೇಶದ 18 ಪ್ರಾಂತ್ಯಗಳಲ್ಲಿ ಡೆಲ್ಟಾ ಪತ್ತೆಯಾಗಿದೆ. ರಾಜಧಾನಿ ಬೀಜಿಂಗ್‌ನಲ್ಲಿಯೂ ಅಧಿಕ ಸಂಖ್ಯೆಯ ಪ್ರಕರಣಗಳು ದೃಢಪಡುತ್ತಿವೆ.
ಕಳೆದ 10 ದಿನದಲ್ಲಿ ಸುಮಾರು 300ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ತ್ವರಿತಗತಿಯಲ್ಲಿ ಡೆಲ್ಟಾ ತಳಿಯ ಸೋಂಕು ಹರಡುತ್ತಿದೆ ಎಂಬುದು ಹೆಚ್ಚಿನ ಆತಂಕ ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
18 ರಾಜ್ಯಗಳಲ್ಲಿ 27 ನಗರಗಳಲ್ಲಿ ಡೆಲ್ಟಾ ಪತ್ತೆಯಾಗಿದೆ. ರಾಜಧಾನಿ ಬೀಜಿಂಗ್‌ನಲ್ಲಿ ಎರಡು ಹೊಸ ಪ್ರಕರಣ ಪತ್ತೆಯಾಗಿವೆ. ದಕ್ಷಿಣ ಚೀನಾದ ಪ್ರವಾಸಿ ತಾಣ ಝಾಂಗಿಯಾಜೆಯಿಂದ ಬಂದಿದ್ದ ಕುಟುಂಬದ ಮೂವರಿಗೆ ಸೋಂಕು ತಗುಲಿದೆ ಎಂದರು. ಸೋಂಕು ಪ್ರಕರಣ ಹೆಚ್ಚಿರುವ ಝಾಂಗಿಯಾಜೆ ನಗರಕ್ಕೆ ಶನಿವಾರ 11 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು. ಇದು, ಆಡಳಿತಕ್ಕೆ ಬರುವ ದಿನಗಳಲ್ಲಿ ಸೋಂಕು ಹೆಚ್ಚಬಹುದು ಎಂಬ ಆತಂಕವನ್ನು ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.