ಕುಂದಾಪುರ: ತಾಲೂಕಿನ ಚರ್ಚ್ ರಸ್ತೆಯಲ್ಲಿ ಜು.31 ಶುಕ್ರವಾರ ನಸುಕಿನ ವೇಳೆ ನಡೆದ ಶೂಟೌಟ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ರಚಿಸಿದ ಪೊಲೀಸರ ವಿಶೇಷ ತಂಡ ಬಂಧಿಸಿದೆ. ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ ಪ್ರಸ್ತುತ ಕುಂದಾಪುರದ ಫ್ಲ್ಯಾಟ್‌ವೊಂದರಲ್ಲಿ ವಾಸವಿರುವ ಡೆರಿಕ್ ಕ್ರಾಸ್ತಾ (55) ಬಂಧಿತ ಆರೋಪಿ.
ಹೆಬ್ರಿ ಮೂಲದ ಪ್ರಸ್ತುತ ಬಾರ್ಕೂರು ಕಚ್ಚೂರು ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ (45) ಎನ್ನುವರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಆರೋಪಿ ಡೆರಿಕ್ ತಲೆಮರೆಸಿಕೊಂಡಿದ್ದ. ಭಟ್ಕಳದ ಬೆಳಕೆ ಹೇರಬುಡಿಕೆ ಎಂಬಲ್ಲಿ ಶನಿವಾರ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ತನಿಖೆ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಕೊಲೆಗೆ ಕಾರಣ : ಇನ್ನು ಈ ಕೊಲೆಗೆ ಕಾರಣ ಕೇವಲ 1.5 ಲಕ್ಷ ರೂ ಎನ್ನುವ ಮಾಹಿತಿ ಅಚ್ಚರಿ ಮೂಡಿಸಿದೆ. ಕೆಲವು ತಿಂಗಳುಗಳ ಹಿಂದೆ ಡೈರಿಕ್ ಸ್ನೇಹಿತರವರ ಪತ್ನಿಗೆ ಸಂಬಂಧಿಸಿ ವಿದೇಶಕ್ಕೆ ತೆರಳುವ ವಿಚಾರವಾಗಿ ಏಜೆಂಟ್ ಓರ್ವ 27 ಲಕ್ಷ ರೂ ವಂಚಿಸಿದ್ದ. ಈ ಹಿನ್ನಲೆಯಲ್ಲಿ ಡೆರಿಕ್ 27 ಲಕ್ಷ ರೂ ವಸೂಲಿ ಮಾಡಿಕೊಡುವ ಜವಾಬ್ದಾರಿಯನ್ನ ಐವನ್ ಗೆ ವಹಿಸಿದ್ದ. ಈ ಹಿನ್ನಲೆಯಲ್ಲಿ ಪತ್ನಿ ಎಂದು ಕರೆಯುವ ಮಹಿಳೆ ಲಲಿತ ಜೊತೆ ಐವನ್ ಬೆಂಗಳೂರಿಗೆ ತೆರಳಿದ್ದಾನೆ. ಕ್ಯಾನ್ಸರ್ ಪೀಡಿತೆ ಆಗಿರುವ ಲಲಿತಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬೆಂಗಳೂರಿಗೆ ತೆರಳಿ ಅಲ್ಲಿ ಮೋಸ ಮಾಡಿರುವ ಏಜೆಂಟ್ ನನ್ನ ಪತ್ತೆ ಹಚ್ಚಿ 27 ಲಕ್ಷ ರೂ ವಸೂಲಿ ಮಾಡಿದ್ದ ಐವನ್.
ಕಳೆದ ಕೆಲವು ದಿನಗಳಿಂದ ಹಣಕಾಸಿನ ವಿಚಾರವಾಗಿ ಐವನ್ ಮತ್ತು ಡೆರಿಕ್ ಎನ್ನುವಾತನ ಮಧ್ಯೆ ಭಿನ್ನಾಭಿಪ್ರಾಯ ತೀವ್ರಗೊಂಡಿತ್ತು. ಆದರೆ ಗುರುವಾರ ರಾತ್ರಿ ಸುಮಾರು 11.45ಕ್ಕೆ ಡೆರಿಕ್, ಐವನ್‌ಗೆ ಕರೆ ಮಾಡಿ ಬಾಕಿ ಹಣ ನೀಡುವಂತೆ ಒತ್ತಾಯಿಸಿದ್ದು, ಮಾತಿನ ಚಕಮಕಿ ತಾರಕಕ್ಕೇರಿದೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೇಳೆ ಡೆರಿಕ್, ಧಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾನೆ.
ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ಎದುರಿನ ಕಾಂಕ್ರೀಟ್ ರಸ್ತೆಯ ಲೊಕೇಶನ್ ಅನ್ನು ಡೆರಿಕ್ ಐವನ್‌ಗೆ ಕಳುಹಿಸಿದ್ದಾನೆ. ಸವಾಲು ಸ್ವೀಕರಿಸಿದ ಐವನ್, ಹೆಂಡತಿ ಎಂದು ಕರೆಯಿಸಿಕೊಳ್ಳುವ ಮಹಿಳೆಯೊಂದಿಗೆ ಕಾರಿನಲ್ಲಿ ಅಲ್ಲಿಗೆ ತೆರಳಿದ್ದಾನೆ. ಸುಮಾರು 3.15ರ ವೇಳೆಗೆ ನಿರ್ಜನ ರಸ್ತೆಯಲ್ಲಿ ಇಬ್ಬರ ಮುಖಾಮುಖಿಯಾಗಿದೆ. ಕೆಂಪು ಬಣ್ಣದ ಕಾರಿನಲ್ಲಿ ಬಂದಿದ್ದ ಡೆರಿಕ್, ಐವನ್ ಕಾರಿನ ಎದುರು ವಾಹನ ನಿಲ್ಲಿಸಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಐವನ್ ಕಾರಿನಿಂದ ಕೆಳಗಿಳಿದ ತಕ್ಷಣ ಡೆರಿಕ್ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಐವನ್ ಸೊಂಟದ ಕೆಳಭಾಗಕ್ಕೆ ತಗುಲಿದ್ದು, ಅವರು ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಕುಸಿದುಬಿದ್ದಿದ್ದಾರೆ. ಅತ್ತ ಡೆರಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಐವನ್ ಅಧಿಕ ರಕ್ತ ಸ್ರಾವದಿಂದ ಚರ್ಚ್ ರಸ್ತೆಯಲ್ಲಿಯೇ ಹೆಣವಾಗಿದ್ದಾನೆ.
Discover more from Coastal Times Kannada
Subscribe to get the latest posts sent to your email.








Discussion about this post