ದಾವಣಗೆರೆ, ಅ 29: ನ್ಯಾಮತಿ ಪಟ್ಟಣದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI ಬ್ಯಾಂಕ್‌ನಲ್ಲಿ ಸೋಮವಾರ (ಅ.28) ಕಳ್ಳತನವಾಗಿದೆ. ಬ್ಯಾಂಕ್ ಲಾಕರ್ನ 509 ಬ್ಯಾಗ್ಗಳಲ್ಲಿ ಇದ್ದ 12.95 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬೆರಳಚ್ಚು ತಜ್ಞ ಮತ್ತು ಡಾಗ್ ಸ್ಕ್ಯ್ವಾಡ್ ತಂಡ ತಪಾಸಣೆ ನಡೆಸಿತು. ಆದರೆ ಇದುವರೆಗೂ ಒಂದು ಸುಳಿವು ಸಿಕ್ಕಿಲ್ಲ. ಬ್ಯಾಂಕ್ ಹೊರಗೆ, ಒಳಗೆ ಎಲ್ಲ ಕಡೆ ತಡಕಾಡಿದರೂ ಕಳ್ಳರ ಹೆಜ್ಜೆ ಗುರುತು ಮಾತ್ರ ಪತ್ತೆಯಾಗಿಲ್ಲ.
ನ್ಯಾಮತಿ ಪಟ್ಟಣದ ನೆಹರೂ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಶಾಖೆಯ ಎಡಭಾಗದ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು, ಮೊದಲ ಲಾಕರ್‌ನಲ್ಲಿದ್ದ ಒಟ್ಟು12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಬ್ಯಾಂಕ್ ಸಿಬ್ಬಂದಿ ಸುನೀಲ್ ಕುಮಾರ್ ಯಾದವ್ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಘಟನೆ ಸೋಮವಾರ ಬೆಳಗ್ಗೆ ಸಿಬ್ಬಂದಿ ಬ್ಯಾಂಕ್ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಗ್ಯಾಸ್ ಕಟರ್ ಬಳಸಿ ಸೇಫ್ ಲಾಕರ್ ತೆಗೆದಿರುವ ಖದೀಮರು; ಒಂದಲ್ಲ, ಎರಡಲ್ಲ ಬರೋಬ್ಬರಿ 12.95 ಕೋಟಿ ಮೌಲ್ಯದ ಚಿನ್ನಾಭರಣವನ್ನು ಖದೀಮರು ದೋಚಿರುವುದು ಪೊಲೀಸರಿಗೆ ತಲೆಬಿಸಿಯಾಗಿ ಪರಿಣಮಿಸಿದೆ. ಇಷ್ಟೆಲ್ಲ ಕೃತ್ಯ ಎಸಗಲು ಕಳ್ಳರು ಬ್ಯಾಂಕ್ ಕಿಟಕಿಯ ಮೂಲಕ ಒಳಗೆ ಪ್ರವೇಶ ಮಾಡಿದ್ದು, ಗ್ಯಾಸ್ ಕಟರ್ ಸಹಾಯದಿಂದ ಭದ್ರತಾ ಕೋಣೆಯ ಬಾಗಿಲು ಮುರಿದಿದ್ದಾರೆ. ಬಳಿಕ ಬ್ಯಾಂಕ್ ನ ಮೂರು ಸೇಫ್ ಲಾಕರ್ಗಳ ಪೈಕಿ ಚಿನ್ನಾಭರಣ ಇದ್ದ ಒಂದು ಲಾಕರ್ ನ್ನೇ ಗ್ಯಾಸ್ ಕಟರ್ ನಿಂದ ಮುರಿದು 12.95 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಇನ್ನೆರಡು ಲಾಕರ್ ಮುರಿಯುವ ಪ್ರಯತ್ನ ಫಲ ನೀಡದೆ ಇದ್ದಾಗ ಅ ಎರಡು ಲಾಕರ್‌ನಲ್ಲಿದ್ದ 30 ಲಕ್ಷ ಹಣ ಹಾಗೂ ಚಿನ್ನಾಭರಣ ಸೇಫ್ ಆಗಿದೆ ಎಂದು ಎಫ್ಐಆರ್ ಅಲ್ಲಿ ಉಲ್ಲೇಖಿಸಲಾಗಿದೆ.
ಸಿ.ಸಿ.ಟಿವಿ ಕ್ಯಾಮರಾದ ಡಿವಿಆರ್ ಕೂಡ ಹೊತ್ತೊಯ್ದ ಕಳ್ಳರು; ಚಿನ್ನಾಭರಣದ ಜೊತೆಜೊತೆಗೆ ಕಳ್ಳರು ಬ್ಯಾಂಕ್‌ನಲ್ಲಿದ್ದ ಸಿ.ಸಿ. ಟಿವಿ ಕ್ಯಾಮರಾದ ಡಿವಿಆರ್ ಕೂಡ ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನ ಬ್ಯಾಂಕ್‌ಗೆ ರಜೆ ಇದ್ದ ಕಾರಣ ವಾರಾಂತ್ಯದಲ್ಲೇ ಕೃತ್ಯವೆಸಗಿದ್ದಾರೆ. ಬ್ಯಾಂಕ್ ಒಳಗೆ ನುಗ್ಗಿದ ತಕ್ಷಣ ಸಿ.ಸಿ.ಟಿ.ವಿ, ಸೈರನ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಅಂದಾಜು 30 ಲಕ್ಷ ಹಣ ಹಾಗೂ ಚಿನ್ನಾಭರಣ ಇದ್ದ ಇನ್ನೆರಡು ಲಾಕರ್‌ಗಳನ್ನು ಕತ್ತರಿಸಲು ಪ್ರಯತ್ನಿಸಿದ್ದಾರೆ. ಗ್ಯಾಸ್ ಖಾಲಿಯಾಗಿ ಅಥವಾ ಸಮಯ ಮೀರಿದ್ದರಿಂದ ಪರಾರಿಯಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸಾಕ್ಷಿ ಸುಳಿವು ಸಿಗಬಾರದೆಂದು ಖಾರದ ಪುಡಿ ಎರಚಿದ ದುಷ್ಕರ್ಮಿಗಳು; ದುಷ್ಕರ್ಮಿಗಳು ಈ ಕೃತ್ಯ ಎಸಗಿದ ಬಳಿಕ ಯಾವುದೇ ಸಾಕ್ಷಿ ಸಿಗದಂತೆ, ಬ್ಯಾಂಕ್ ತುಂಬಾ ಖಾರದ ಪುಡಿ ಎರಚಿದ್ದಾರೆ. ಶ್ವಾನದಳಕ್ಕೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಈ ತಂತ್ರ ಅನುಸರಿಸಿದ್ದಾರೆ. ಬೆರಳಚ್ಚು ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಕ್ಕೆ ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶ್ವಾನದಳ ಸವಳಂಗ ರಸ್ತೆಯ ಸಾಲಬಾಳು ಗ್ರಾಮದವರೆಗೆ ತೆರಳಿವೆ. ಇದೇ ಮಾರ್ಗದಲ್ಲಿ ದುಷ್ಕರ್ಮಿಗಳು ಪರಾರಿಯಾಗಿರುವ ಸಾಧ್ಯತೆ ಇದೆ ಶಂಕೆ ಪೊಲೀಸರಿಗೆ ಮೂಡಿದೆ.
ಒಟ್ಟಾರೆ ಎಸ್‌ಬಿಐ ಬ್ಯಾಂಕ್ ಕಳ್ಳತನ ಪ್ರಕರಣ ನಿಜಕ್ಕೂ ಅಲ್ಲಿನ ಗ್ರಾಹಕರ ನಿದ್ದೆಗೆಡಿಸಿದೆ. ನಮ್ಮ ಆಭರಣ ಮತ್ತು ದುಡ್ಡಿಗೆ ಭದ್ರತೆ ಯಾರು ಎಂಬ ಆತಂಕ ಗ್ರಾಹಕರಲ್ಲಿ ಮೂಡಿದೆ. ಆದಷ್ಟೂ ಬೇಗ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಲಿ ಎಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ.
“ಬ್ಯಾಂಕ್‌ಗೆ ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಿಲ್ಲ. ಹಳೆಯ ಕಾಲದ ಸೈರನ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಬ್ಯಾಂಕ್ ಭದ್ರತಾ ಲೋಪದಿಂದ ಇದು ನಡೆದಿದೆ. ಪ್ರಕರಣದ ತನಿಖೆಗೆ ಐವರು ಪೊಲೀಸ್ ಇನ್‌ಸ್ಟೆಕ್ಟರ್‌ಗಳ ನೇತೃತ್ವದ 5 ತಂಡಗಳನ್ನು ರಚಿಸಲಾಗಿದೆ. 10 ಜನ ಪಿಎಸ್‌ಐಗಳು ಸೇರಿ ಹಲವು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತನಿಖೆ ಆರಂಭವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post