ಮಂಗಳೂರು, ಅ.31: ಕೊಂಕಣಿ ಕಥೊಲಿಕ್ ಉದ್ಯಮಿಗಳ, ವೃತ್ತಿಪರರ ಮತ್ತು ಕೃಷಿಕರ ಸಂಸ್ಥೆ ‘ರಚನಾ’ ನವೆಂಬರ್ 3ರಂದು ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಲಿದೆ. ಭಾನುವಾರ ಸಂಜೆ 6 ಗಂಟೆಗೆ ಕುಲಶೇಖರದ ಕೊರ್ಡೆಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುಣೆಯ ಮಿಲಿಟರಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಮಾಂಡೆಂಟ್ ಆಗಿರುವ ರಿಯರ್ ಆ್ಯಡ್ಮಿರಲ್ ನೆಲ್ಸನ್ ಡಿಸೋಜ ಭಾಗವಹಿಸಲಿದ್ದಾರೆ.
ಎನ್‍ಆರ್‍ಐ ಉದ್ಯಮಿ ಮೈಕಲ್ ಡಿಸೋಜ, ರೋಹನ್ ಕಾರ್ಪೋರೇಶನ್‍ನ ಚೇರ್’ಮ್ಯಾನ್ ರೋಹನ್ ಮೊಂತೇರೊ ಮುಖ್ಯ ಅತಿಥಿಯಾಗಿರುವರು. ಬೆಂಗಳೂರಿನ ಆರ್ಚ್ ಬಿಶಪ್ ಪೀಟರ್ ಮಚಾದೊ ಉದ್ಘಾಟಿಸಲಿದ್ದು, ಮಂಗಳೂರಿನ ಬಿಶಪ್ ಪೀಟರ್ ಪಾವ್ಲ್ ಸಲ್ಡಾನ್ಹ ಅಧ್ಯಕ್ಷತೆ ವಹಿಸಲಿದ್ದಾರೆ. ರಚನಾ ಅಧ್ಯಕ್ಷ ಜಾನ್ ಮೊಂತೇರೊ, ಬೆಳ್ಳಿ ಹಬ್ಬದ ಸಮಾರಂಭದ ಸಂಚಾಲಕಿ ಮಾರ್ಜರಿ ಟೆಕ್ಸೇರಾ ಉಪಸ್ಥಿತರಿರುವರು. 25 ವರ್ಷಗಳ ಸವಿನೆನಪಿಗಾಗಿ ಕೊಂಕಣಿ ಕ್ರೈಸ್ತ ಸಮುದಾಯದ ಯುವ ಉದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಚನಾ ಕಥೊಲಿಕ್ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಸಮಾರಂಭದಲ್ಲಿ ಇದರ ಉದ್ಘಾಟನೆ ನೆರವೇರಲಿದೆ.
ಈ ಸಂದರ್ಭದಲ್ಲಿ ರಚನಾ ಪ್ರಾರಂಭಿಸಲು ಕಾರಣಕರ್ತರಾದ ಮಾರಿಟ್ಟೊ ಸಿಕ್ವೇರಾ ಅವರನ್ನು ಸನ್ಮಾನಿಸಲಾಗುವುದು. ರಚನಾದ ಉಗಮ ಮತ್ತು ನಡೆದು ಬಂದ ಹಾದಿಯ ಬಗ್ಗೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು.
ರಚನಾದ ಆರಂಭ: ಕೆನರಾ ಕೊಂಕಣಿ ಕಥೊಲಿಕ್ ಸಮುದಾಯದ ಉದ್ಯಮಿಗಳು, ವ್ಯಾಪಾರಿಗಳು ಒಗ್ಗೂಡುವ ಅವಶ್ಯಕತೆಯನ್ನು ಮನಗಂಡ ಕೆಲ ಮುಖಂಡರು ಆ ನಿಟ್ಟಿನಲ್ಲಿ ಚರ್ಚಿಸಿದರು. ಅದರ ಫಲಿತಾಂಶವಾಗಿ 1998ರ ಸಪ್ತೆಂಬರ್ 6ರಂದು ಬೆಂದೂರು ಚರ್ಚ್ ಹಾಲ್‍ನಲ್ಲಿ ದಕ್ಷಿಣ ಕನ್ನಡ ಮತ್ತು ನೆರೆಯ ಜಿಲ್ಲೆಗಳಿಂದ 500ರಷ್ಟು ಕ್ರೈಸ್ತ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಕಾಫಿ ಪ್ಲಾಂಟರ್’ಗಳು, ವೃತ್ತಿಪರರು, ಕೃಷಿಕರು ಸಭೆ ಸೇರಿದರು. ಆ ಸಭೆಯಲ್ಲಿ ಚರ್ಚಿಸಿದಂತೆ ಪ್ರಮುಖರು ಸೇರಿ ರಚನಾ ಸಂಸ್ಥೆಯ ಆರಂಭಕ್ಕೆ ಅಡಿಪಾಯ ಹಾಕಿದರು. ಹೀಗೆ 1998 ನವೆಂಬರ್ 1ರಂದು ರಚನಾ ಉದ್ಘಾಟನೆಯಾಯಿತು. ಬಳಿಕ ತಾತ್ಕಾಲಿಕ ಸಮಿತಿ ರಚಿಸಿ ಸಂಘಟನೆಯ ರೂಪುರೇಷೆ ಸಿದ್ಧಪಡಿಸಿ, ಸದಸ್ಯರನ್ನು ನೇಮಕಗೊಳಿಸಲಾಯಿತು. 1999ರ ಆಗಸ್ಟ್ 8ರಂದು ಮೊದಲ ಪೂರ್ಣ ಪ್ರಮಾಣದ ಸಭೆ ನಡೆದು ರಚನಾಕ್ಕೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಂದು ರಚನಾದ ಮೊದಲ ಅಧ್ಯಕ್ಷರಾಗಿ ಜಾನ್ ಅಲೆಕ್ಸ್ ಸಿಕ್ವೇರಾ ಚುನಾಯಿತರಾದರು.
ರಚನಾ ಹಮ್ಮಿಕೊಳ್ಳುವ ಕಾರ್ಯಕ್ರಮಗಳು: ಸಮುದಾಯದಲ್ಲಿ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಧಕರನ್ನು ಗುರುತಿಸುವ ಮತ್ತು ಗೌರವಿಸುವ ಕಾರ್ಯವನ್ನೂ ರಚನಾ ಮಾಡುತ್ತದೆ. ಸ್ವ-ಉದ್ಯಮಿಗಳು, ವೃತ್ತಿಪರರು ಮತ್ತು ಕೃಷಿ, ಕೈಗಾರಿಕೆ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರನ್ನು ರಚನಾ ಸನ್ಮಾನಿಸುತ್ತಾ ಬಂದಿದೆ. ಔದ್ಯಮಿಕ ಕ್ಷೇತ್ರದಲ್ಲಿ ತರುಣರನ್ನು ತೊಡಗಿಸಲು ಬೇಕಾದ ಜಾಗೃತಿ ಉಂಟು ಮಾಡುವುದಲ್ಲದೆ ಅವರಿಗೆ ಬೇಕಾದ ಸೂಕ್ತ ತರಬೇತಿಯನ್ನೂ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಹಲವು ಕಾರ್ಯಾಗಾರಗಳನ್ನು ಆಗಾಗ ಏರ್ಪಡಿಸಿದೆ. ಅಷ್ಟಲ್ಲದೇ ರಚನಾ ಸದಸ್ಯರ ಸಭೆಗಳನ್ನು ನಿಯಮಿತವಾಗಿ ನಡೆಸುತ್ತಾ ವಿವಿಧ ವಿಷಯಗಳ ಪರಿಣತರಿಂದ ಮತ್ತು ವಿಶೇಷ ಆಹ್ವಾನಿತರಿಂದ ಮಾಹಿತಿ ಹಂಚುವ, ಮಾರ್ಗದರ್ಶನ ಒದಗಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿ ಸದಸ್ಯರ ಏಳಿಗೆಗಾಗಿ ಶ್ರಮಿಸುತ್ತಾ ಬಂದಿದೆ.
ಪ್ರತಿಷ್ಠಿತ ರಚನಾ ಪ್ರಶಸ್ತಿಗಳು: ಕ್ರೈಸ್ತ ಸಮಾಜದ ಶ್ರೇಷ್ಠ ಸಾಧಕರನ್ನು ಬೃಹತ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸುವ ಪರಿಪಾಠವನ್ನು ರಚನಾವು ಹಮ್ಮಿಕೊಂಡು ಬಂದಿದೆ. ವರ್ಷದ ಅತ್ಯುತ್ತಮ ಕೃಷಿಕ, ವೃತ್ತಿಪರ, ಉದ್ಯಮಿ, ಎನ್‍ಆರ್‍ಐ ಉದ್ಯಮಿ ಮತ್ತು ಅಪ್ರತಿಮ ಮಹಿಳಾ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 2003ರಲ್ಲಿ ನಡೆದ ಮೊದಲ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾರತದ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಭಾಗವಹಿಸಿದ್ದರು. ಇಲ್ಲಿಯವರೆಗೆ 15 ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನೆರವೇರಿದ್ದು ಒಟ್ಟು 67 ಸಾಧಕರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ರಚನಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು: ಜಾನ್ ಅಲೆಕ್ಸ್ ಸಿಕ್ವೇರಾ, ಮಾರ್ಜೊರಿ ಟೆಕ್ಸೇರಾ, ರೊಯ್ ಕ್ಯಾಸ್ತೆಲಿನೊ, ರುಡಾಲ್ಫ್ ಡಿಸಿಲ್ವ, ಮಾರ್ಸೆಲ್ ಮೊಂತೇರೊ, ರೊನಾಲ್ಡ್ ಗೋಮ್ಸ್, ಜಾನ್ ಎಸ್. ನೊರೊನ್ಹಾ, ಐವನ್ ಡಿಸೋಜ, ಜಾನ್ ಮೊಂತೇರೊ, ಗಿಲ್ಬರ್ಟ್ ಡಿಸೋಜ, ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಎಲಿಯಾಸ್ ಸಾಂಕ್ತಿಸ್ ಹಾಗೂ ವಿನ್ಸೆಂಟ್ ಕುಟಿನ್ಹೊ. ಜಾನ್ ಮೊಂತೇರೊ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಪ್ರಸ್ತುತ ಆಡಳಿತ ಸಮಿತಿ: ಜಾನ್ ಮೊಂತೇರೊ, ಅಧ್ಯಕ್ಷ; ನವೀನ್ ಲೋಬೊ, ಉಪಾಧ್ಯಕ್ಷ; ವಿಜಯ್ ವಿಶ್ವಾಸ್ ಲೋಬೊ, ಕಾರ್ಯದರ್ಶಿ; ವಾಲ್ಟರ್ ಡಿಕುನ್ಹ, ಸಹ ಕಾರ್ಯದರ್ಶಿ; ನೆಲ್ಸನ್ ಮೊಂತೇರೊ, ಕೋಶಾಧಿಕಾರಿ. ಸದಸ್ಯರು: ಲವಿನಾ ಮೊಂತೇರೊ, ಯುಲಾಲಿಯಾ ಡಿಸೋಜ, ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಸಿಎ ವಿಕ್ರಮ್ ಸಲ್ಡಾನ್ಹ, ರೋಶನ್ ಆ್ಯಂಟನಿ ಡಿಸೋಜ, ಆಲ್ವಿನ್ ಪ್ರಕಾಶ್ ಸಿಕ್ವೇರಾ, ವಿನ್ಸೆಂಟ್ ಕುಟಿನ್ಹೊ, ರೋಹನ್ ಮೊಂತೇರೊ, ಸಚಿನ್ ರೂಪರ್ಟ್ ಪಿರೇರಾ ಮತ್ತು ಆಲ್ವಿನ್ ಡಿಸೋಜ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ: ಜಾನ್ ಮೊಂತೇರೊ, ಅಧ್ಯಕ್ಷರು, ಮಾರ್ಜೊರಿ ಟೆಕ್ಸೇರಾ, ಸಂಚಾಲಕಿ, ಜೆ.ಆರ್. ಲೋಬೊ, ಕಾರ್ಯಕಾರಿ ಸಮಿತಿ, ರೊಯ್ ಕ್ಯಾಸ್ತೆಲಿನೊ, ಕಾರ್ಯಕಾರಿ ಸಮಿತಿ, ವಿಜಯ್ ವಿಶ್ವಾಸ್ ಲೋಬೊ, ಕಾರ್ಯದರ್ಶಿ, ನೆಲ್ಸನ್ ಮೊಂತೇರೊ, ಕೋಶಾಧಿಕಾರಿ.
Discover more from Coastal Times Kannada
Subscribe to get the latest posts sent to your email.
Discussion about this post