ಉಳ್ಳಾಲ, ಡಿ.1: ಡಕೋಟಾ ವಾಹನಗಳನ್ನು ನೋಡಬೇಕಾದರೆ ದೂರದ ಆಫ್ರೀಕಾಗೆ ಹೋಗಬೇಕಾಗಿಲ್ಲ. ಮಂಗಳೂರಿನ ಉಳ್ಳಾಲದಲ್ಲೇ ಡಕೋಟಾ ವಾಹನಗಳಿವೆ. ಬಾಗಿಲನ್ನು ಹಗ್ಗದಿಂದ ಕಟ್ಟಿ, ಚಾಲಕ ಕಿಟಕಿ ಮೂಲಕ ನುಸುಳಿ ವಾಹನಕ್ಕೆ ಹೋಗುತ್ತಾನೆ. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉಳ್ಳಾಲ ನಗರದಾದ್ಯಂತ ಕಸ ಸಂಗ್ರಹ ಮಾಡುವ ಡಕೋಟ ವಾಹನದ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಉಳ್ಳಾಲ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಗರಂ ಆಗಿದ್ದಾರೆ.
ನ.29ರಂದು ಉಳ್ಳಾಲ ನಗರಸಭೆಯ ವಾರ್ಡ್ ಸಂಖ್ಯೆ 15 ಹಿದಾಯತ್ ನಗರದ ಕಲ್ಲಾಪು ಪರಿಸರದಲ್ಲಿ ವಾಹನ ಕಸ ಸಂಗ್ರಹಕ್ಕೆ ಬಂದಾಗ ಚಾಲಕ, ವಾಹನ ಚಲಾಯಿಸಲು ವಾಹನದ ಒಳಗಡೆ ಹೋಗಬೇಕಾದರೆ ವಾಹನದ ಬಾಗಿಲನ್ನು ತೆರೆದು ಹೋಗುವ ಬದಲು, ಕಿಟಕಿಯ ಮೂಲಕ ಹೋಗಿದ್ದರು. ಈ ದೃಶ್ಯವನ್ನು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕದ ರಾಜ್ಯ ಘಟಕದ ಕೋಶಾಧಿಕಾರಿ ಅಬ್ದುಸ್ಸಲಾಂ ಸಿ.ಎಚ್. ಎಂಬುವವರು ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು.
ಉಳ್ಳಾಲ ನಗರಸಭೆ ಅಂದರೆ ಅದು ಭ್ರಷ್ಟಾಚಾರದ ಕೂಪ ಇದ್ದಂತೆ. ಇಲ್ಲಿ ತ್ಯಾಜ್ಯ ಸಂಗ್ರಹಕ್ಕೆ ತುಕ್ಕು ಹಿಡಿದು ನಲುಗಿದ ವಾಹನವನ್ನ ಬಳಸುತ್ತಿದ್ದು ಅದರ ಎರಡೂ ಬಾಗಿಲುಗಳು ಜೋತು ಬಿದ್ದು ಓಪನ್ ಮಾಡಲೂ ಆಗುತ್ತಿಲ್ಲ. ಈ ವಾಹನವನ್ನ ಚಲಾಯಿಸುವ ಚಾಲಕ ಪ್ರಾಣ ಒತ್ತೆ ಇಟ್ಟು ದುಡಿಯುವ ಅನಿವಾರ್ಯತೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಪ್ರತಿನಿಧಿಸುವ ಕ್ಷೇತ್ರದ ಉಳ್ಳಾಲ ನಗರಸಭೆಗೆ ಕನಿಷ್ಟ ಕಸ ಸಂಗ್ರಹಕ್ಕೂ ಸರಿಯಾದ ವಾಹನ ಒದಗಿಸಲು ಸಾಧ್ಯವಿಲ್ಲವೇ.?ವಾಹನ ಚಾಲಕನಿಗೂ ಸಂಸಾರ ಇಲ್ಲವೇ.. ಈ ವಾಹನದಲ್ಲಿ ಅವಘಡ ಆದರೆ ಅವರ ಪಾಡೇನು ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತೆ ವಾಣಿ ವಿ ಆಳ್ವ ಪ್ರತಿಕ್ರಿಯೆ ನೀಡಿದ್ದು, ಈ ವಾಹನ ಏಳು ವರ್ಷ ಹಳೆಯದ್ದಾಗಿದ್ದು, ದುರಸ್ಥಿ ಮಾಡಲು ಅಸಾಧ್ಯವಾಗಿದೆ. ಹೊಸ ಆಟೋ ಟಿಪ್ಪರ್ ವಾಹನ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಶಾಸಕ ಖಾದರ್ ಗಮನಕ್ಕೂ ತರಲಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಧಾನಸಭೆಯ ಸಭಾಧ್ಯಕ್ಷರ ತವರು ಕ್ಷೇತ್ರದಲ್ಲೇ ಆಡಳಿತ ವ್ಯವಸ್ಥೆ ಅವ್ಯವಸ್ಥೆಯ ಗೂಡಾಗಿದ್ದು, ಜನ ಛೀಮಾರಿ ಹಾಕುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post